ಕಾಫಿ ನಾಡು ಚಿಕ್ಕಮಗಳೂರಲ್ಲಿ ಚಿನ್ನದ ನಿಕ್ಷೇಪ ಇದೆಯಂತೆ. ಸಾವಿರಾರು ಎಕರೆ ಪ್ರದೇಶದಲ್ಲಿ, ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಹೀಗಾಗಿ ಹೆಚ್ಚಿನ ಶೋಧಕ್ಕೆ ಅನುಮತಿ ನೀಡುವಂತೆ, ಬೆಂಗಳೂರಿನ ಕಂಪನಿಯೊಂದು ಪರಿಸರ ಇಲಾಖೆಗೆ ಮನವಿ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವ್ಯಾಪ್ತಿಯಲ್ಲಿ, ಬರೋಬ್ಬರಿ 10 ಸಾವಿರ ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ಖಚಿತವಾಗಿದೆ. ಪಶ್ಚಿಮ ಘಟ್ಟಗಳ ಸಾಲು, ದಟ್ಟ ಅರಣ್ಯ ಹೊಂದಿರುವ ಪ್ರದೇಶ ಇದಾಗಿದ್ದು, ಜೀವ ವೈವಿದ್ಯಗಳನ್ನು ಹೊಂದಿದೆ. ಇದ್ರಿಂದ ಶೋಧ ಕಾರ್ಯಕ್ಕೆ ಅನುಮತಿ ನೀಡಬೇಕಾ? ಬೇಡ್ವಾ ಅನ್ನೋ ಬಗ್ಗೆ ಚಿಂತನೆ ನಡೆಸಲಾಗ್ತಿದೆ.
ಔರಮ್ ಜಿಯೋ ಎಕ್ಸ್‌ಪ್ಲೋರೇಶನ್ ಪ್ರೈವೇಟ್ ಲಿಮಿಟೆಡ್‌ಗೆ, 10,082 ಎಕರೆ ಭೂಮಿಯಲ್ಲಿ ಶೋಧಕ್ಕೆ ಈಗಾಗಲೇ ಅನುಮತಿ ಸಿಕ್ಕಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಈಗಾಗಲೇ ಪರವಾನಗಿ ನೀಡಿದೆ. ಅದರಲ್ಲಿ 5,600 ಎಕರೆ ಅರಣ್ಯ ಪ್ರದೇಶ ಮತ್ತು 3,600 ಎಕರೆ ಕೃಷಿ ಭೂಮಿಯಾಗಿದೆ. ದಟ್ಟವಾದ ಕಾಡಿನ ಕಾರಣ, ಆ ಪ್ರದೇಶದಲ್ಲಿನ ಶಿಲಾ ಪದರಗಳ ಅಧ್ಯಯನವು ಕಷ್ಟಕರವಾಗಿದೆಯಂತೆ.
ಕಳೆದ ವರ್ಷ ಗಣಿ ಇಲಾಖೆ ಆಹ್ವಾನಿಸಿದ್ದ ಟೆಂಡರ್ ಅನ್ನು, ಔರಮ್ ಕಂಪನಿ ಪಾಲಾಗಿತ್ತು. ಹಿಂದಿನ ಸಂಶೋಧನೆಗಳ ಪ್ರಕಾರ, ತರೀಕರೆಯ ಪ್ರದೇಶಗಳಲ್ಲಿ ಪ್ರತಿ ಟನ್‌ಗೆ 19 ಗ್ರಾಂನಿಂದ 80 ಗ್ರಾಂವರೆಗೆ ಚಿನ್ನವನ್ನು ಪಡೆಯಬಹುದು ಎಂದು ಹೇಳಲಾಗಿತ್ತು. ಹೊಸೂರಿನ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊನ್ನುಹಟ್ಟಿಯಲ್ಲಿ ಚಿನ್ನದ ನಿಕ್ಷೇಪ ಇವೆ ಎಂಬುದು, ಈ ಹಿಂದಿನ ಶೋಧ ಕಾರ್ಯಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಉಲ್ಲೇಖವಾಗಿದೆಯಂತೆ.
ಈ ಪ್ರದೇಶದಲ್ಲಿ ಚಿನ್ನಕ್ಕಾಗಿ ಶೋಧ ನಡೆಸುವುದರಿಂದ ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಹುಲಿತಿಮ್ಮಾಪುರ ಮತ್ತು ಶೋಧ ಕಾರ್ಯಕ್ಕೆ ಪ್ರಸ್ತಾಪಿಸಲಾದ ಪ್ರದೇಶಗಳು, ಲಕ್ಕವಳ್ಳಿ ಆನೆ ಕಾರಿಡಾರ್‌ನ ಭಾಗವಾಗಿದೆ. ಶೋಧ ಕಾರ್ಯದ ವೇಳೆ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು, ಪರಿಸರ ಮತ್ತು ವನ್ಯ ಜೀವಿ ಪ್ರಿಯರು ಆಗ್ರಹಿಸಿದ್ದಾರೆ.