ಚಿನ್ನದ ಬೆಲೆ ಹೆಚ್ಚಳಕ್ಕೆ ಬ್ರೇಕ್ ಇಲ್ಲದಂತಾಗಿದೆ. ಚಿನ್ನದ ಬೆಲೆ ಏರುತ್ತಿರುವ ವೇಗ ನೋಡಿದರೆ, ಅದು ರಾಕೆಟ್‌ಗಿಂತಲೂ ಸ್ಪೀಡಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಮೌಲ್ಯ ಏರಿಕೆಯ ವೇಗ ಇತಿಹಾಸದಲ್ಲಿಯೇ ಅಪೂರ್ವ ಮಟ್ಟಕ್ಕೇರಿದೆ. ಹೂಡಿಕೆದಾರರಿಗೆ ಮಾತ್ರವಲ್ಲದೆ, ಸಾಮಾನ್ಯ ಗ್ರಾಹಕರಿಗೂ ಈ ಏರಿಕೆ ಶಾಕ್ ನೀಡುವಂತಾಗಿದೆ.
2025ರ ಆರಂಭದಿಂದಲೂ ಚಿನ್ನದ ಬೆಲೆ ಸುಮಾರು 50% ರಷ್ಟು ಏರಿಕೆ ಕಂಡಿದ್ದು, ಇದೇ ಮೊದಲ ಬಾರಿಗೆ ಒಂದು ಔನ್ಸ್ ಚಿನ್ನದ ಮೌಲ್ಯ $4,000 ಗಡಿಯನ್ನು ದಾಟಿದೆ ಎಂದು ಅಂತರಾಷ್ಟ್ರೀಯ ಮಾರುಕಟ್ಟೆ ವರದಿಗಳು ತಿಳಿಸಿವೆ. ಇದು ಕೇವಲ ಆರಂಭವಷ್ಟೇ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇನ್ನು ಚಿನ್ನದ ಏರಿಕೆಗೆ ಒಂದೇ ಕಾರಣವಲ್ಲ ಹಲವು ಕಾರಣಗಳಿವೆ. ದೊಡ್ಡಣ್ಣ ಅಮೆರಿಕ ಮತ್ತು ಚೀನಾದ ನಡುವಿನ ವ್ಯಾಪಾರ ಯುದ್ಧ, ನಮ್ಮ ಕೈಯಲ್ಲಿರುವ ದುಡ್ಡಿನ ಮೌಲ್ಯ ಕಡಿಮೆಯಾಗಬಹುದೆಂಬ ಹಣದುಬ್ಬರದ ಭಯ, ಮತ್ತು ಪ್ರಪಂಚದ ‘ದೊಡ್ಡ ಬಾಸ್’ ಆಗಿದ್ದ ಅಮೆರಿಕನ್ ಡಾಲರ್ ಮೇಲಿನ ನಂಬಿಕೆ ಕಡಿಮೆಯಾಗುತ್ತಿರುವುದು ಈಗ ಎಲ್ಲರನ್ನ ಯೋಚಿಸುವಂತೆ ಮಾಡಿದೆ.
ಇತ್ತೀಚೆಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ವಸ್ತುಗಳ ಮೇಲೆ 100% ಸುಂಕ ಹಾಕ್ತೀನಿ ಅಂತ ಗುಡುಗಿದರು. ಇದು ಷೇರು ಮಾರುಕಟ್ಟೆಯಲ್ಲಿ ಭೂಕಂಪವನ್ನೇ ಸೃಷ್ಟಿಸಿತು. ದೊಡ್ಡ ದೊಡ್ಡ ಕಂಪನಿಗಳ ಷೇರುಗಳು ಪಲ್ಟಿ ಹೊಡೆದವು. ಆಗ ಭಯಗೊಂಡ ಹೂಡಿಕೆದಾರರು, ತಮ್ಮ ಹಣವನ್ನು ಷೇರುಗಳಿಂದ ತೆಗೆದು ಸುರಕ್ಷಿತವಾದ ಚಿನ್ನದ ಮೇಲೆ ಹಾಕಲು ಶುರುಮಾಡಿದರು. ಡಾಲರ್ ಮೌಲ್ಯ ಕುಸಿದರೂ, ಚಿನ್ನದ ಮೌಲ್ಯ ಮಾತ್ರ 1.5% ಏರಿಕೆ ಕಂಡಿತ್ತು.
ಷೇರು ಮಾರುಕಟ್ಟೆಯಲ್ಲಿ ಏರುಪೇರುಗಳು ಹೆಚ್ಚಾಗುತ್ತಿದ್ದಂತೆ, ಜನರು ಸುರಕ್ಷಿತ ಹೂಡಿಕೆ ಆಯ್ಕೆಗಳೆಡೆಗೆ ತಿರುಗುತ್ತಿದ್ದಾರೆ. ಚಿನ್ನವೂ ಅದರಲ್ಲಿ ಪ್ರಮುಖವಾಗಿದೆ. ತಕ್ಷಣದ ಲಾಭಕ್ಕಿಂತ ಭದ್ರತೆಗೆ ಆದ್ಯತೆ ನೀಡುತ್ತಿರುವ ಹೂಡಿಕೆದಾರರಿಗೆ ಚಿನ್ನವೇ ವಿಶ್ವಾಸದ ನಾಣ್ಯವಾಗಿ ಪರಿಣಮಿಸಿದೆ.
ಚಿನ್ನದ ಬೆಲೆ ಏರಿಕೆಯ ಈ ಗತಿಯು ಮುಂದಿನ ವರ್ಷಗಳಲ್ಲಿ ತೀವ್ರವಾಗಬಹುದೆಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹೂಡಿಕೆದಾರರು ಸಮಚಿತ್ತದಿಂದ ನಿಗದಿತ ಗುರಿಯೊಂದಿಗೆ ಹೂಡಿಕೆ ಮಾಡಲು ತಜ್ಞರು ಸಲಹೆ ನೀಡುತ್ತಿದ್ದಾರೆ. ಮನೆಯ ಚಿನ್ನ ಈಗ ಹೂಡಿಕೆಗೆ ಸರಿಯಾದ ಆಯ್ಕೆ ಆಗಬಹುದಾದರೂ, ಮುಂಜಾಗ್ರತೆ ಅಗತ್ಯ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ