ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು 42ನೇ ಬರ್ತ್‍ಡೇ ಸಂಭ್ರಮ. ಈ ವರ್ಷ ಗಣೇಶ್ ಹುಟ್ಟುಹಬ್ಬ ಆಚರಿಸಿಲ್ಲ. ಇದರಿಂದ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಗಣೇಶ್ ಈಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಗಣೇಶ್ ಅವರನ್ನು ಕಂಡರೆ ಅನೇಕರಿಗೆ ಅಚ್ಚುಮೆಚ್ಚು. ಆದರೆ ಇದೀಗ ಅವರು ತಮ್ಮ ಅಭಿಮಾನಿಯೋರ್ವರ ಜೀವನದಲ್ಲಿ ಪವಾಡ ಮಾಡಿದ್ದು ವಿಶೇಷವಾಗಿದೆ.
2003ರಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾಮಿಡಿ ಟೈಮ್ಸ್ ಮೂಲಕ ಗಣೇಶ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. 2006ರಲ್ಲಿ ತೆರೆಕಂಡ ಚೆಲ್ಲಾಟ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡರು. ಅದೇ ವರ್ಷ ತೆರೆಕಂಡ ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ್ ಅದೃಷ್ಟ ಬದಲಾಯಿತು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ಗಣೇಶ್‍ಗೆ ಅಭಿಮಾನಿಗಳನ್ನು ಕಂಡರೆ ಬಲವಾದ ಪ್ರೀತಿ. ಇದೀಗ ಅವರು ತೋರಿದ ಪ್ರೀತಿ ಅಭಿಮಾನಿಯ ಜೀವ ಉಳಿಸಿದೆ. ಖಾಸಗಿ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈ ವಿಚಾರ ಬಹಿರಂಗವಾಗಿದೆ.
ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿದ್ದ ಪಾಲಕರು ಮತ್ತು ಮಕ್ಕಳು ಗಣೇಶ್ ಸಹಾಯದ ಕಥೆ ಹೇಳಿದರು. ಇವನು ನನ್ನ ಮಗ ಶಶಾಂಕ್. ಗೋಲ್ಡನ್ ಸ್ಟಾರ್ ಗಣೇಶ್ ಎಂದರೆ ಪಂಚಪ್ರಾಣ. ಜ್ವರದ ಕಾರಣ 25 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಜ್ವರ ಕಡಿಮೆಯಾಗುತ್ತಿರಲಿಲ್ಲ. ಆ ನಂತರ ನನ್ನ ಮಗನಿಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತು. ಮಗನ ಸ್ಥಿತಿ ತುಂಬಾ ಗಂಭೀರವಾಗಿತ್ತು. ಗಣೇಶ್ ಅವರನ್ನು ನೋಡಬೇಕು ಎಂದು ಅವನು ಸದಾ ಹಾತೊರೆಯುತ್ತಿದ್ದನು. ಬಳಿಕ ಆ ದಿನ ಆಸ್ಪತ್ರೆಗೆ ಗಣೇಶ್ ಬಂದಿದ್ದಾಗಿ ಶಶಾಂಕ್ ತಂದೆ ಕಾರ್ಯಕ್ರಮದಲ್ಲಿ ಹೇಳಿದ್ದರು.
ಮಗನಿಗೆ ಎಷ್ಟೇ ಚಿಕಿತ್ಸೆ ನೀಡಿದರೂ ಜ್ವರ ಕಡಿಮೆಯಾಗಿಲ್ಲ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 1.50 ಲಕ್ಷ ಪ್ಲೇಟ್ಲೆಟ್ ಇರಬೇಕು. ಆದರೆ, ನನ್ನ ಮಗ ಡೇಂಜರ್ ಝೋನ್‍ನಲ್ಲಿದ್ದಾನೆ. ಆಗ ಗಣೇಶ್ ಬಂದು ಮಗನನ್ನು ಮುಟ್ಟಿದರು. ಅವರು ನನ್ನ ಮಗನ ಜೊತೆ ಮೂರು ಗಂಟೆಗಳ ಕಾಲ ಇದ್ದರು. ಮರುದಿನದಿಂದ ಪವಾಡ ಸಂಭವಿಸಿತು. ಪ್ಲೇಟ್ಲೆಟ್ ಎಣಿಕೆ ಸಮಾನವಾಗಿತ್ತು. ನನ್ನ ಮಗ ಬದುಕಿರುವುದಕ್ಕೆ ಗಣೇಶ್ ಕಾರಣ ಎಂದು ಹೇಳಿಕೊಂಡಿದ್ದಾರೆ.