Tuesday, October 14, 2025

Latest Posts

ಆಳಂದದಲ್ಲೇ ಗೋಲ್‌ಮಾಲ್‌ : ಖರ್ಗೆ ಸ್ಫೋಟಕ ಆರೋಪ!

- Advertisement -

ಕಳೆದ ಲೋಕಸಭಾ ಚುನಾವಣೆಯ ವೇಳೆ ಮತದಾರರ ಅಕ್ರಮ ಪ್ರಕ್ರಿಯೆಗೆ ಚುನಾವಣಾ ಆಯೋಗವೇ ಸಹಕಾರ ನೀಡಿದೆ ಎಂಬ ಆರೋಪವನ್ನು ಕಾಂಗ್ರೆಸ್ ಈಗ ಮತ್ತೊಮ್ಮೆ ಮುಂದಿಟ್ಟಿದೆ. ಈ ಬಾರಿ, 2023ರಲ್ಲಿ ನಡೆದ ಕರ್ನಾಟಕದ ಆಳಂದ ವಿಧಾನಸಭಾ ಚುನಾವಣೆಯ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಗಂಭೀರ ಟೀಕೆ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಆಳಂದ ಪ್ರಕರಣದ ಕುರಿತು ನಡೆಯುತ್ತಿರುವ ಸಿಐಡಿ ತನಿಖೆಗೆ ಚುನಾವಣಾ ಆಯೋಗವೇ ಅಡ್ಡಿಯಾಗಿದೆ. ತನಿಖೆಗೆ ಅಗತ್ಯವಾದ ಸಂಪೂರ್ಣ ಸಾಕ್ಷ್ಯಾಧಾರಗಳನ್ನು ಆಯೋಗ ಹಂಚಿಕೊಳ್ಳದೇ, ಆರೋಪಿಗಳ ರಕ್ಷಣೆಗೆ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಚುನಾವಣಾ ಆಯೋಗದ ನಿಷ್ಠೆ ಮತ್ತು ಸ್ವತಂತ್ರತೆಯ ಮೇಲೆ ಪ್ರಶ್ನೆ ಎತ್ತಿದ್ದಾರೆ.

ಆಳಂದ ಪ್ರಕರಣದ ಮೂಲ 2023ರ ವಿಧಾನಸಭಾ ಚುನಾವಣೆಗೂ ಮುಂಚಿನದ್ದಾಗಿದೆ. ಆ ವೇಳೆಗೆ ಫಾರ್ಮ್‌ 7 ಮೂಲಕ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು 6,018 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಕೇವಲ 24 ಮಾತ್ರ ನೈಜವಾಗಿದ್ದು, ಉಳಿದ 5,994 ಅರ್ಜಿಗಳು ಅಕ್ರಮವಾಗಿದ್ದವು ಎಂಬುದು ಪರಿಶೀಲನೆ ವೇಳೆ ಬಹಿರಂಗವಾಗಿತ್ತು. ನಂತರ ಈ ಕುರಿತು ಆಳಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್‌. ಪಾಟೀಲ್ ದೂರು ನೀಡಿದ್ದರು ಮತ್ತು ನಂತರದ ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು.

ಆದರೆ, ಮಹತ್ವದ ಸಾಕ್ಷ್ಯಗಳನ್ನು ಚುನಾವಣಾ ಆಯೋಗ ಸಿಐಡಿಗೆ ನೀಡದೆ ತನಿಖೆ ಕುಂಠಿತಗೊಳಿಸಿದೆ ಎಂದು ಖರ್ಗೆ ಟೀಕಿಸಿದ್ದಾರೆ. ಅವರು, ಮತಕಳವು ಪ್ರಕರಣದಲ್ಲಿ ಹಿಂದಿರುವವರನ್ನು ರಕ್ಷಿಸುವ ಉದ್ದೇಶದಿಂದಲೇ ಆಯೋಗ ಸಾಕ್ಷ್ಯಗಳನ್ನು ತಡೆಹಿಡಿದಿದೆಯೇ? ಬಿಜೆಪಿ ಒತ್ತಡಕ್ಕೆ ಮಣಿದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಖರ್ಗೆ ಭಾರತೀಯ ಚುನಾವಣಾ ಆಯೋಗದ ನಿಷ್ಠೆಯ ಕುರಿತಾಗಿ ತೀವ್ರ ಅನುಮಾನ ವ್ಯಕ್ತಪಡಿಸಿದ್ದು, ಅದು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ. ಪ್ರತಿಯೊಬ್ಬರ ಮತದಾನದ ಹಕ್ಕು ಮತ್ತು ಭಾರತದ ಸಂವಿಧಾನದ ರಕ್ಷಣೆಯಾಗಬೇಕು ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss