ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ಸಹಾಯಧನ ನೀಡಲಾಗುತ್ತದೆ. ಪ್ರತೀ ಕಂತಿನಲ್ಲೂ 2,000 ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಇದುವರೆಗೆ 20 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 9 ಕೋಟಿಗೂ ಹೆಚ್ಚು ಫಲಾನುಭವಿ ರೈತರು 21ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.
ಹಿಂದಿನ ಬಾರಿ 20ನೇ ಕಂತಿನ ಹಣ ಬಿಡುಗಡೆ ತಡವಾಗಿ ನಡೆದಿತ್ತು. ಜೂನ್‌ನಲ್ಲಿ ನಿರೀಕ್ಷಿಸಲಾಗಿದ್ದರೂ, ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಯಿತು. ಆಗ 2.4 ಕೋಟಿ ಮಹಿಳಾ ರೈತರು ಸೇರಿದಂತೆ ಸುಮಾರು 9.8 ಕೋಟಿ ರೈತರಿಗೆ 2,000 ಹಣ ನೀಡಲಾಗಿತ್ತು. ಈಗ 21ನೇ ಕಂತು ಈ ತಿಂಗಳಲ್ಲಿಯೇ ಅಥವಾ ಹೆಚ್ಚು ಸಾಧ್ಯತೆಯಿಂದ ನವೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಪಿಎಂ ಕಿಸಾನ್ ಯೋಜನೆಯ ಉದ್ದೇಶ ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವುದಾಗಿದೆ. ಸರ್ಕಾರವು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ಸಹಾಯಧನ ನೀಡುತ್ತದೆ. ವರ್ಷಕ್ಕೆ ಒಟ್ಟು 6,000 ಹಣವನ್ನು ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಅವಧಿಗಳಲ್ಲಿ ಕಂತುಗಳಾಗಿ ಬಿಡುಗಡೆ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ರೈತರು ಸ್ವಯಂ ನೊಂದಾಯಿಸಿಕೊಳ್ಳಬಹುದು, ಆದರೆ ಅವರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕಾಗಿದೆ. ಆದರೆ, ಐಟಿಆರ್ ಸಲ್ಲಿಸುವವರು, ವೈದ್ಯರು, ಇಂಜಿನಿಯರ್‌ಗಳು, ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರು ಮತ್ತು ಜನಪ್ರತಿನಿಧಿಗಳು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಬಹುದು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

