ಈಗಾಗಲೇ ಆಷಾಢ ಮಾಸ ಆರಂಭವಾಗಿದ್ದು, ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆಷಾಢ ಮಾಸದ ಶುಕ್ರವಾರಗಳಂದು ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ. ಆಷಾಢ ಮಾಸದ ಮೊದಲ ಶುಕ್ರವಾರ ಮೆಟ್ಟಿಲು ಹತ್ತಿ ಬಂದ ಭಕ್ತರಿಗೆ ಸಮಸ್ಯೆಗಳಾಗಿತ್ತು ಮತ್ತು ಭಕ್ತರು ಈ ಬಗ್ಗೆ ಬಹಳಷ್ಟು ಅಸಮಾಧಾನವನ್ನು ಕೂಡ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಕೆಲವು ಸುಧಾರಿತ ಕ್ರಮಕ್ಕೆ ಮುಂದಾಗಿದೆ. ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಹೊಸ ಯೋಜನೆಯನ್ನು ರೂಪಿಸಿದೆ.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುಂದಿನ ಆಷಾಢ ಶುಕ್ರವಾರಗಳಂದು ಮೆಟ್ಟಿಲು ಹತ್ತಿ ಬರುವ ಭಕ್ತರನ್ನು ಧರ್ಮ ದರ್ಶನದ ಸರತಿ ಸಾಲಿನಲ್ಲೇ ದರ್ಶನಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಮೊದಲ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ನಿರೀಕ್ಷೆಗೂ ಮೀರಿ ಹೆಚ್ಚು ಭಕ್ತರು ಬಂದಿದ್ದರು. ಇದರಿಂದಾಗಿ ಜನಸಂದಣಿಯಿಂದಾಗಿ ಮೆಟ್ಟಿಲು ಹತ್ತಿ ಬಂದ ಭಕ್ತರು ದೇವಿಯ ದರ್ಶನ ಪಡೆಯಲು ವಿಳಂಬವಾಯಿತು. ಧರ್ಮ ದರ್ಶನ ಅಥವಾ ಟಿಕೆಟ್ ಪಡೆದವರಿಗೆ ತ್ವರಿತಗತಿಯಲ್ಲಿ ದೇವಿಯ ದರ್ಶನವಾಯಿತು.
ಹೀಗಾಗಿ, ಧರ್ಮ ದರ್ಶನದ ಸರತಿ ಸಾಲಿನಲ್ಲೇ ಮೆಟ್ಟಿಲು ಹತ್ತಿ ಬರುವ ಭಕ್ತರನ್ನು ಕೂಡ ಕಳುಹಿಸಲು ನಿರ್ಧರಿಸಲಾಗಿದೆ. ಉಳಿದಂತೆ ಸುಗಮ ದರ್ಶನಕ್ಕಾಗಿ ಲಲಿತಮಹಲ್ ಪ್ಯಾಲೇಸ್ ಆವರಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳು ಉಚಿತ ಬಸ್ ಸೇವೆ ಪಡೆದು ಕಡಿಮೆ ಸಮಯದಲ್ಲಿ ಸುಗಮವಾಗಿ ದೇವರ ದರ್ಶನ ಪಡೆದುಕೊಳ್ಳಬಹುದು. ಆದುದರಿಂದ ಭಕ್ತಾಧಿಗಳು ಉಚಿತ ಬಸ್ ಸೇವೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ