2026ರ ಹಂಗಾಮಿಗಾಗಿ ಕೇಂದ್ರ ಸರ್ಕಾರ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಹೋಳು ಕೊಬ್ಬರಿಗೆ ಕ್ವಿಂಟಲ್‌ಗೆ ₹445 ಹಾಗೂ ಉಂಡೆ ಕೊಬ್ಬರಿಗೆ ₹400 ಬೆಂಬಲ ಬೆಲೆ ಹೆಚ್ಚಿಸಲಾಗಿದ್ದು, ಇದರಿಂದ ಹೋಳು ಕೊಬ್ಬರಿಯ ಬೆಲೆ ಕ್ವಿಂಟಲ್‌ಗೆ ₹12,027 ಹಾಗೂ ಉಂಡೆ ಕೊಬ್ಬರಿಯ ಬೆಲೆ ₹12,500 ಆಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಬಲ ಬೆಲೆ ಹೆಚ್ಚಳದಿಂದ ತೆಂಗು ಬೆಳೆಗಾರರಿಗೆ ಹೆಚ್ಚಿನ ಆದಾಯ ಸಿಗಲಿದೆ. ಜೊತೆಗೆ, ಕೊಬ್ಬರಿ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಹೆಚ್ಚಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
2014ರಿಂದ ನಿರಂತರವಾಗಿ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸುತ್ತಾ ಬಂದಿದ್ದು, 2014ರಲ್ಲಿ ಹೋಳು ಕೊಬ್ಬರಿಗೆ ಕ್ವಿಂಟಲ್‌ಗೆ ₹5,250 ಹಾಗೂ ಉಂಡೆ ಕೊಬ್ಬರಿಗೆ ₹5,500 ಇತ್ತು. ಈಗಿನ ಬೆಲೆಗಳಿಗೆ ಹೋಲಿಸಿದರೆ, ಹೋಳು ಕೊಬ್ಬರಿಯ ಬೆಲೆಯಲ್ಲಿ ಶೇ.129 ಹಾಗೂ ಉಂಡೆ ಕೊಬ್ಬರಿಯ ಬೆಲೆಯಲ್ಲಿ ಶೇ.127ರಷ್ಟು ಏರಿಕೆಯಾಗಿದೆ.
ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿನ ಮೇರೆಗೆ, ಉತ್ತಮ ಗುಣಮಟ್ಟದ ಹೋಳು ಮತ್ತು ಉಂಡೆ ಕೊಬ್ಬರಿಗೆ ನ್ಯಾಯಯುತ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಬೆಂಬಲ ಬೆಲೆ ಯೋಜನೆ—ಪಿಎಸ್‌ಎಸ್—ಅಡಿ, ಕೊಬ್ಬರಿ ಖರೀದಿಗಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ—ಎನ್‌ಎಎಫ್‌ಇಡಿ—ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ—ಎನ್‌ಸಿಸಿಎಫ್—ಕೇಂದ್ರ ನೋಡಲ್ ಏಜೆನ್ಸಿಗಳಾಗಿ ಮುಂದುವರಿಯಲಿವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
2018–19ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಆದೇಶಿತ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ನೀತಿಯಂತೆ ಕೊಬ್ಬರಿಯ ಎಂಎಸ್‌ಪಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



