ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಅಭಿಮಾನಿಗಳು ‘ದಿ ಡೆವಿಲ್’ ಸಿನಿಮಾಗಾಗಿ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗುತ್ತಿದೆ. ಈ ಚಿತ್ರದಿಂದ ಬರುವ ಪ್ರತಿ ಅಪ್ಡೇಟ್ ಕೂಡ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಿದೆ. ಈಗ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದೆ. ಮೋಷನ್ ಪೋಸ್ಟರ್ ಬಿಡುಗಡೆಗೆ ದಿನಾಂಕ ಕೂಡ ನಿಗದಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಈ ಪೋಸ್ಟರ್ ಅನಾವರಣ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಬಗ್ಗೆ ಇನ್ಸ್‌ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ, ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಇದೇ ಜುಲೈ 19ರ ಶನಿವಾರದಂದು ಸಂಜೆ 8 ಗಂಟೆಗೆ ನಮ್ಮ ಸೋಶಿಯಲ್ ಮೀಡಿಯಾ ಪೇಜ್ ಹಾಗೂ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟೀಸ್ ಸಮ್ಮುಖದಲ್ಲೂ ಬಿಡುಗಡೆ ಆಗಲಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಇರಲಿ’ ಎಂದು ಪೋಸ್ಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವಾದ ಆದ ಬಳಿಕ ಬರುತ್ತಿರುವ ದರ್ಶನ್ ಅವರ ಮೊದಲ ಸಿನಿಮಾ ಆದ್ದರಿಂದ ‘ದಿ ಡೆವಿಲ್’ ಸಿನಿಮಾ ಹೈಪ್ ಸೃಷ್ಟಿ ಮಾಡುತ್ತಿದೆ. ಅದ್ದೂರಿಯಾಗಿ ಶೂಟಿಂಗ್ ಮಾಡಲಾಗುತ್ತಿದೆ.
ದಿ ಡೆವಿಲ್ ಸಿನಿಮಾಗೆ ಹಲವು ಕಡೆಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಹಾಡಿನ ಚಿತ್ರೀಕರಣಕ್ಕಾಗಿ ದರ್ಶನ್ ಅವರು ಥೈಲ್ಯಾಂಡ್ಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಶೂಟಿಂಗ್ ಮುಗಿದ ಬಳಿಕ ವಿದೇಶದಲ್ಲಿ ಶೂಟಿಂಗ್ ಆರಂಭ ಮಾಡಲಾಗಿದೆ. ಕೋರ್ಟ್ ಅನುಮತಿ ಪಡೆದು ಚಿತ್ರೀಕರಣಕ್ಕಾಗಿ ದರ್ಶನ್ ಅವರು ವಿದೇಶಕ್ಕೆ ಹಾರಿದ್ದಾರೆ. 10 ದಿನಗಳ ಕಾಲ ಅವರು ಥೈಲ್ಯಾಂಡ್ನಲ್ಲೇ ಉಳಿಯಲಿದ್ದಾರೆ.
ಮಿಲನ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ಅವರ ‘ದಿ ಡೆವಿಲ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಟಿ ರಚನಾ ರೈ ಚಿತ್ರದಲ್ಲಿ ಮಿಂಚುತ್ತಿದ್ದಾರೆ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಅವರಿಗೂ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವಿದೆ. ಇನ್ನು ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ