ರಾಜ್ಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಅಧಿಕಾರಕ್ಕೆ ಬಂದ ಬಳಿಕ ಭರವಸೆ ನೀಡಿದ್ದ ಸರ್ಕಾರ, ಇ ದೀಗ ಎರಡೂವರೆ ವರ್ಷದ ನಂತರ ಮೊದಲ ಹಂತದ ನೇಮಕಾತಿಗೆ ಹಸಿರು ನಿಶಾನೆ ತೋರಿಸಿದೆ. ಎಲ್ಲವೂ ಯೋಜನೆಯಂತೆ ನಡೆದರೆ 2026ರ ಆರಂಭದಲ್ಲೇ 24,300 ಹುದ್ದೆಗಳ ನೇಮಕಾತಿ ಪೂರ್ಣಗೊಳ್ಳಲಿದೆ.
ಬೆಳಗಾವಿ ಅಧಿವೇಶನದಲ್ಲಿ ಗುರುವಾರ ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಳ ಮೀಸಲು ಜಾರಿಗೆ ಸಂಬಂಧಿಸಿದ ತೊಂದರೆಯಿಂದ ವಿಳಂಬಗೊಂಡಿದ್ದ ನೇಮಕಾತಿ ಪ್ರಕ್ರಿಯೆಯನ್ನು ಹಂತಹಂತವಾಗಿ ಮರುಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಥಮ ಹಂತದಲ್ಲಿ 24,300 ಹುದ್ದೆಗಳ ನೇಮಕಕ್ಕೆ ಆರ್ಥಿಕ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಜೊತೆಗೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಾತ್ರ 32,132 ಹುದ್ದೆಗಳ ನೇಮಕಾತಿಯನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸದಸ್ಯ ಹನುಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯದಲ್ಲಿ ಒಟ್ಟು 2,84,881 ಖಾಲಿ ಹುದ್ದೆಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಇದರಲ್ಲಿ 96,844 ಹುದ್ದೆಗಳು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಈಗಾಗಲೇ ಭರ್ತಿ ಮಾಡಲಾಗಿದ್ದು, ಉಳಿದ 1,88,037 ಹುದ್ದೆಗಳಲ್ಲೂ 56,432 ಹುದ್ದೆಗಳು ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ.
ಕಳೆದ ಮೂರು ವರ್ಷಗಳಲ್ಲಿ:
A ಶ್ರೇಣಿ – 562
B ಶ್ರೇಣಿ – 619
C ಶ್ರೇಣಿ – 23,119 ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ.
ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕ 8,157 ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದ್ದು, 3,081 ಹುದ್ದೆಗಳ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಿಎಂ ವಿವರಿಸಿದರು.
ಇಲಾಖಾವಾರು ಖಾಲಿ ಹುದ್ದೆಗಳು (2025–26)
ಶಾಲಾ ಶಿಕ್ಷಣ & ಸಾಕ್ಷರತೆ – 79,694
ಆರೋಗ್ಯ & ವೈದ್ಯಕೀಯ ಶಿಕ್ಷಣ – 37,572
ಒಳಾಡಳಿತ – 28,188
ಉನ್ನತ ಶಿಕ್ಷಣ – 13,599
ಕಂದಾಯ – 10,867
ಪಶುಸಂಗೋಪನೆ – 11,020
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ – 10,504
ಪರಿಶಿಷ್ಟ ಜಾತಿ ಕಲ್ಯಾಣ – 9,646
ಹಿಂದುಳಿದ ವರ್ಗಗಳ ಕಲ್ಯಾಣ – 8,525
ವೈದ್ಯರ ಹುದ್ದೆ ಭರ್ತಿ – ಆರೋಗ್ಯ ಇಲಾಖೆಯ ಮಾಹಿತಿ
ರಾಜ್ಯದಲ್ಲಿ ತಜ್ಞ ವೈದ್ಯರು ಸೇರಿ 3,000 ವೈದ್ಯರ ಹುದ್ದೆಗಳು ಖಾಲಿ ಇದ್ದು, ಇವುಗಳಲ್ಲಿ 1,500 ಹುದ್ದೆಗಳನ್ನು ಜನವರಿಯೊಳಗೆ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗಿದೆ. 800 ವೈದ್ಯರ ನೇಮಕ ಈಗಾಗಲೇ ಪೂರ್ಣಗೊಂಡಿದ್ದು ಕೌನ್ಸೆಲಿಂಗ್ ಮೂಲಕ ಹಂಚಿಕೆ ನಡೆಯಲಿದೆ. ಖಾಲಿ ಇರುವ 337 ತಜ್ಞ ವೈದ್ಯರು ಮತ್ತು 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಿಳಿಸಿದರು.
ಇನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ 3% ಮೀಸಲು, ಇತರ ಇಲಾಖೆಗಳಲ್ಲಿ 2% ಮೀಸಲು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು. ಈವರೆಗೆ 70 ಕಾನ್‌ಸ್ಟೆಬಲ್, 14 ಪಿಎಸ್‌ಐಗಳ ನೇಮಕಾತಿ ಪೂರ್ಣಗೊಂಡಿದ್ದು, 13 ಕ್ರೀಡಾಪಟುಗಳಿಗೆ ವಿಶೇಷ ನೇಮಕಾತಿ ಪತ್ರ ವಿತರಿಸಲಾಗಿದೆ. ಕಬಡ್ಡಿ ಸಾಧಕರನ್ನೂ ಮೀಸಲಾತಿಗೆ ಒಳಪಡಿಸುವ ವಿಚಾರ ಪರಿಶೀಲನೆಯಲ್ಲಿ ಇದೆ ಎಂದು ಅವರು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



