ಲವ್ ಮಾಕ್ಟೇಲ್ 3 ಗೆ ಡೇಟ್ ಫಿಕ್ಸ್!

ನಟನಾಗಿ ಗುರುತಿಸಿಕೊಂಡ ಡಾರ್ಲಿಂಗ್ ಕೃಷ್ಣ, ‘ಲವ್ ಮಾಕ್ಟೇಲ್’ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿಯೂ ಮೊದಲ ಹೆಜ್ಜೆಯಲ್ಲಿಯೇ ಭರ್ಜರಿ ಗೆಲುವು ಕಂಡಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ‘ಲವ್ ಮಾಕ್ಟೇಲ್ 2’ ಕೂಡ ಪ್ರೇಕ್ಷಕರ ಮನಗೆದ್ದಿತ್ತು.

ಸೀಕ್ವೆಲ್ ಯಶಸ್ಸಿನ ನಂತರ ‘ಲವ್ ಮಾಕ್ಟೇಲ್ 3’ ಸಿನಿಮಾಕ್ಕೆ ಡಾರ್ಲಿಂಗ್ ಕೃಷ್ಣ ಚಾಲನೆ ನೀಡಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮೂರನೇ ಭಾಗ ಬರುತ್ತಿರುವುದನ್ನು ಅಧಿಕೃತವಾಗಿ ಘೋಷಿಸಿದ್ದರು.

ಈಗ ಹೊಸ ವರ್ಷದ ಉಡುಗೊರೆಯಂತೆ, ‘ಲವ್ ಮಾಕ್ಟೇಲ್ 3’ ಚಿತ್ರದ ಬಿಡುಗಡೆ ದಿನಾಂಕವನ್ನು ಡಾರ್ಲಿಂಗ್ ಕೃಷ್ಣ ಪ್ರಕಟಿಸಿದ್ದಾರೆ. ಏಪ್ರಿಲ್ 10ರಂದು ‘ಲವ್ ಮಾಕ್ಟೇಲ್ 3’ ಸಿನಿಮಾ ತೆರೆಗೆ ಬರಲಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಮೊದಲ ಭಾಗ ನವಿರು ಪ್ರೇಮಕಥೆ ಮತ್ತು ಸೂಕ್ಷ್ಮ ಕಥನದ ಮೂಲಕ ಪ್ರೇಕ್ಷಕರ ಮನಗೆದ್ದಿತ್ತು. ಅದಾದ ಬಳಿಕ ‘ಲವ್ ಮಾಕ್ಟೇಲ್ 2’ ಕೂಡ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.

ಈ ಬಾರಿ ‘ಲವ್ ಮಾಕ್ಟೇಲ್ 3’ ಸಿನಿಮಾ ಸಂಪೂರ್ಣ ವಿಭಿನ್ನ ಅನುಭವ ನೀಡಲಿದೆ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ಕಥೆ, ನಿರೂಪಣೆ ಹಾಗೂ ಪ್ರಸ್ತುತಿಯಲ್ಲಿ ಹೊಸತನ ಇರಲಿದೆ ಎಂದು ಭರವಸೆ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಬೇಸಿಗೆ ರಜೆ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 10ರಂದು ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಪ್ರೇಮ ಕಥೆಗಳ ಸರಣಿಯಲ್ಲಿ ‘ಲವ್ ಮಾಕ್ಟೇಲ್ 3’ ಯಾವ ಹೊಸ ಅನುಭವ ನೀಡಲಿದೆ ಅನ್ನೋದನ್ನ ಏಪ್ರಿಲ್ 10ರಂದು ಕಾದು ನೋಡಬೇಕು.

ವರದಿ : ಲಾವಣ್ಯ ಅನಿಗೋಳ

About The Author