ಹಾಸನ ನಗರದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ, ಅಂತೂ ಇಂತೂ ಅಂತಿಮ ಹಂತ ಮುಟ್ಟಿದೆ. ಕಳೆದ 7 ವರ್ಷದಿಂದ ಆಮೆವೇಗದಲ್ಲಿ ಸಾಗಿದ್ದ ಕಾಮಗಾರಿ, 2025ರ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಎನ್.ಆರ್. ವೃತ್ತ ಹಾಗೂ ಹೊಸ ಬಸ್ ನಿಲ್ದಾಣದ ನಡುವೆ, 98 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ರೈಲ್ವೆ ಮೇಲ್ಸೇತುವೆ ಮತ್ತೊಂದು ಭಾಗದ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿತ್ತು. ತನ್ನ ಪಾಲಿನ ಅನುದಾನ ನೀಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ ಮಾಡಲಿ ಎಂದು ರಾಜ್ಯ ಸರ್ಕಾರ ಪತ್ರ ಬರೆದು ಕೈತೊಳೆದುಕೊಂಡಿತ್ತು.
2018ರ ವಿಧಾನಸಭೆ ಚುನಾವಣೆಗೂ ಮುನ್ನ 72 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಮೇಲ್ಸೇತುವೆ ಕಾಮಗಾರಿ, 2022ರ ಮಾರ್ಚ್‌ಗೆ ಪೂರ್ಣಗೊಳ್ಳಬೇಕಿತ್ತು. ಯೋಜನಾ ವೆಚ್ಚ 98 ಕೋಟಿ ರೂ.ಗೆ ಹೆಚ್ಚಳವಾದರೂ, ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ.
ಇನ್ನು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಸಂಸದ ಶ್ರೇಯಸ್ ಪಟೇಲ್, ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಅನುದಾನ ನೀಡುವಂತೆ ಮನವಿ ಮಾಡಿದ್ರು. ಜೆಡಿಎಸ್ ಸಹ 2024ರ ಜುಲೈ 17ರಂದು, ಕೇಂದ್ರ ಸಚಿವ ವಿ.ಸೋಮಣ್ಣರನ್ನು ಹಾಸನಕ್ಕೆ ಆಹ್ವಾನಿಸಿ, ಕಾಮಗಾರಿ ಜಾಗದ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಇಷ್ಟೆಲ್ಲಾ ಪ್ರಯತ್ನದ ಬಳಿಕ ಕಾಮಗಾರಿ ಈಗ ವೇಗ ಪಡೆದುಕೊಂಡಿದೆ.

