2026–27ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮಹತ್ವದ ಪ್ರಕಟಣೆ ಹೊರಡಿಸಿವೆ. ಏಪ್ರಿಲ್ 30ರೊಳಗಾಗಿ ಆಸ್ತಿ ತೆರಿಗೆ ಪಾವತಿಸುವ ನಾಗರಿಕರಿಗೆ ಒಟ್ಟು ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿರುವ ಮಂ ಡ್ಯ ಜಿಲ್ಲೆಯ ನಗರಸಭೆಗಳು ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ, ಕೈಗಾರಿಕಾ ನಿವೇಶನ ಹಾಗೂ ಕಟ್ಟಡಗಳ ಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಈ ಸೌಲಭ್ಯ ಪಡೆಯಬಹುದು.
ಮಂಡ್ಯ, ಮದ್ದೂರು ನಗರಸಭೆ ಸೇರಿದಂತೆ ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ ಪುರಸಭೆ ಮತ್ತು ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗೆ ಈ ನಿಯಮ ಅನ್ವಯವಾಗಲಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ತೆರಿಗೆ ಪಾವತಿಸಿದರೆ ಯಾವುದೇ ರಿಯಾಯಿತಿ ಇರುವುದಿಲ್ಲ. ಆದರೆ ದಂಡವೂ ವಿಧಿಸಲಾಗುವುದಿಲ್ಲ. ಈ ಅವಧಿಯಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆಯನ್ನು ಪಾವತಿಸಬೇಕು.
ಜುಲೈ ತಿಂಗಳಿನಿಂದ ತೆರಿಗೆ ಪಾವತಿಸುವವರಿಗೆ ಪ್ರತಿ ತಿಂಗಳಿಗೆ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ. ಒಂದು ವರ್ಷ ವಿಳಂಬವಾದಲ್ಲಿ ಒಟ್ಟು ಶೇ 18ರಷ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ತಿ ಮೌಲ್ಯ ನಿರ್ಧಾರವನ್ನು ಕರ್ನಾಟಕ ಮುದ್ರಾಂಕ ಅಧಿನಿಯಮ 1957ರ ಸೆಕ್ಷನ್ 45(ಬಿ) ಅನ್ವಯ, ಚಾಲ್ತಿಯ ಸಾಲಿನ ಮಾರ್ಗಸೂಚಿ ಬೆಲೆಯ ಶೇ 25ರಷ್ಟು ಪರಿಗಣಿಸಿ ಲೆಕ್ಕ ಹಾಕಲಾಗುತ್ತದೆ. ಪ್ರಸ್ತುತ ಸಾಲಿನಲ್ಲಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಆಗದಿದ್ದರೆ, ಕಳೆದ ಸಾಲಿನ ಬೆಲೆಗೆ ಶೇ 5ರಷ್ಟು ಹೆಚ್ಚಳ ಮಾಡಿ ಪರಿಗಣಿಸಲಾಗುತ್ತದೆ.
ಖಾಲಿ ನಿವೇಶನಗಳಿಗೆ ಮೂಲ ಮೌಲ್ಯದ ಶೇ 0.2ರಷ್ಟು ತೆರಿಗೆ ವಿಧಿಸಲಾಗಿದ್ದು, ಪ್ರತಿ ಚದರ ಅಡಿಗೆ 0.50 ಪೈಸೆಯಂತೆ ಸ್ವಚ್ಛತಾ ಶುಲ್ಕವೂ ನಿಗದಿಪಡಿಸಲಾಗಿದೆ. ಆದರೆ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಂಡು ಅದರ ಛಾಯಾಚಿತ್ರವನ್ನು ಸಲ್ಲಿಸಿದಲ್ಲಿ ಈ ಶುಲ್ಕಕ್ಕೆ ವಿನಾಯಿತಿ ನೀಡಲಾಗುತ್ತದೆ.
ಇನ್ನು ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ 1000 ಚದರ ಅಡಿಗಳವರೆಗಿನ ಖಾಲಿ ನಿವೇಶನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
1000 ಚದರ ಅಡಿಗಿಂತ ಹೆಚ್ಚಿನ ಖಾಲಿ ಜಾಗಗಳಿಗೆ ಪೂರ್ಣ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಪಾವತಿಯನ್ನು ನಿರಾಕರಿಸುವುದು ಅಥವಾ ಮುಂದೂಡುವಂತೆ ಪ್ರಚೋದಿಸುವುದು ಕಾನೂನುಬದ್ಧವಾಗಿ ಶಿಕ್ಷಾರ್ಹ ಅಪರಾಧವಾಗಿದ್ದು, ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಎಚ್ಚರಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




