ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ತಕ್ಷಣ ಆ್ಯಂಬುಲೆನ್ಸ್ ಸಿಗುವುದಿಲ್ಲ. ಈ ಸಮಸ್ಯೆಗೆ ಕರ್ನಾಟಕ ಆರೋಗ್ಯ ಇಲಾಖೆ ಪರಿಹಾರ ಕಂಡು ಹಿಡಿದಿದೆ. ಹಾಗಾಗಿ ಹೊಸ ಯೋಜನೆಯೊಂದಿಗೆ ಮುಂದೆ ಬರ್ತಾಯಿದೆ. ಓಲಾ, ಉಬರ್ ಮಾದರಿಯಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಆಪ್ ಮೂಲಕ ನೀಡುವ ಪ್ರಸ್ತಾವನೆ ಸಿದ್ಧಗೊಂಡಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ.
ಈ ಹೊಸ ವ್ಯವಸ್ಥೆಯು, ಆ್ಯಪ್ ಆಧಾರಿತ ತಂತ್ರಜ್ಞಾನದ ಮೂಲಕ ಬಳಸಬಹುದಾಗಿದೆ. ಇದರ ಬಳಕೆದಾರರು ತಮ್ಮ ಸ್ಥಳದಿಂದ ಹತ್ತಿರದ ಆಸ್ಪತ್ರೆ ಅಥವಾ PHC ಸೆಂಟರ್ ಆಯ್ಕೆ ಮಾಡಿ, ತ್ವರಿತವಾಗಿ ಆ್ಯಂಬುಲೆನ್ಸ್ ಸೇವೆ ಪಡೆಯಲು ಅನುಕೂಲವಾಗಲಿದೆ. ಈಗಿನಂತೆಯೇ 108 ಆ್ಯಂಬುಲೆನ್ಸ್ ಉಚಿತ ಸೇವೆಯು ಮುಂದುವರಿಯಲಿದೆ. ಈ ಯೋಜನೆಯಲ್ಲಿ ಖಾಸಗಿ ಆ್ಯಂಬುಲೆನ್ಸ್‌ಗಳನ್ನೂ ಸೇರಿಸಲಾಗುತ್ತಿದೆ.
ಆ್ಯಂಬುಲೆನ್ಸ್ ಸೇವೆಯ ದುರುಪಯೋಗ ತಡೆಯಲು ಹಾಗೂ ಹೆಚ್ಚು ಹಣ ವಸೂಲಾತಿಗೆ ಕಡಿವಾಣ ಹಾಕಲು, ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಏಕರೂಪ ಶುಲ್ಕವನ್ನು ಆರೋಗ್ಯ ಇಲಾಖೆ ನಿಗದಿ ಮಾಡಲಿದೆ.
ಆಯೋಜನೆಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ಯೋಜನೆಯ ಕುರಿತಂತೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಸಾಧ್ಯತೆಗಳು ಹಾಗೂ ದುರುಪಯೋಗ ತಡೆಗೆ ಅಗತ್ಯ ಕ್ರಮಗಳನ್ನು ಪರಿಶೀಲಿಸಿ, ನಂತರ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದುವರೆಗೆ 108 ಕಂಟ್ರೋಲ್ ರೂಮ್‌ಗೆ ಕರೆ ಮಾಡಿ, ಆ್ಯಂಬುಲೆನ್ಸ್ ಲಭ್ಯತೆ ಕುರಿತು ವಿಷಯ ಗೊತ್ತಾಗುವಷ್ಟರಲ್ಲಿ ವಿಳಂಬದಿಂದಾಗಿ ಅನೇಕ ರೋಗಿಗಳ ‘ಗೋಲ್ಡನ್ ಅವರ್’ ನಷ್ಟವಾಗುತ್ತಿದೆ. ಈ ನೂತನ ಆ್ಯಪ್ ಆಧಾರಿತ ವ್ಯವಸ್ಥೆ ತುರ್ತು ಪರಿಸ್ಥಿತಿಗಳಲ್ಲಿ ಸಮಯಕ್ಕೆ ಸೇವೆ ಒದಗಿಸಿ ಅನೇಕ ಜೀವ ಉಳಿಸಲು ಸಹಕಾರಿಯಾಗಲಿದೆ.
ಸಾಮಾನ್ಯ ಜನತೆಯಿಂದ ಈ ಯೋಜನೆಗೆ ಸ್ವಾಗತ ವ್ಯಕ್ತವಾಗಿದೆ. ಖಾಸಗಿ ಆ್ಯಂಬುಲೆನ್ಸ್‌ಗಳು ಇಷ್ಟಪಟ್ಟಂತೆ ಹಣ ಕೇಳುವ ಸ್ಥಿತಿಗೆ ಕಡಿವಾಣ ಬೀಳಲಿದೆ. ಸರ್ಕಾರದ ಈ ಪ್ರಯತ್ನ ಬಹಳ ಒಳ್ಳೆಯದು ಎಂದು ನಾಗರಿಕ ಹೇಳುತ್ತಿದ್ದಾರೆ. ಈ ಯೋಜನೆ ಇನ್ನು ಕೆಲವೇ ದಿನಗಳಲ್ಲಿ ಪೂರ್ಣ ರೂಪದಲ್ಲಿ ಸಿದ್ಧವಾಗಲಿದ್ದು, ಆನ್‌ಲೈನ್ ಆ್ಯಂಬುಲೆನ್ಸ್ ಸೇವೆ ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
ವರದಿ : ಲಾವಣ್ಯ ಅನಿಗೋಳ