ಹೊಸ ರೇಷನ್ ಕಾರ್ಡ್ ಗಾಗಿ ಕಾಯುವವರಿಗೆ ಸಿಹಿ ಸುದ್ದಿ!

ರಾಜ್ಯದಲ್ಲಿ ಹೊಸ ಪಡಿತರ ಚೀಟಿ ನಿರೀಕ್ಷೆಯಲ್ಲಿರುವವರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಅನಧಿಕೃತ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಿಬೇಕು. ಅರ್ಹ ಕುಟುಂಬಗಳಿಗೆ ಶೀಘ್ರದಲ್ಲೇ ಹೊಸ ಪಡಿತರ ಚೀಟಿಗಳನ್ನು ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಜಿಲ್ಲಾಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ರಾಜ್ಯಾದ್ಯಂತ ಅನಧಿಕೃತ ಪಡಿತರ ಚೀಟಿಗಳನ್ನು ಪರಿಶೀಲಿಸಿ, ಅವುಗಳನ್ನು ರದ್ದುಪಡಿಸಲಾಗುತ್ತದೆ. ನಿಖರ ಪಡಿತರ ವಿತರಣೆಗೆ ಅರ್ಹ ಕುಟುಂಬಗಳಿಗೆ ಹೊಸ ಚೀಟಿಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕುರಿತಂತೆ ಮಾತನಾಡಿದ ಸಚಿವರು ತೂಕ ಮತ್ತು ಅಳತೆಯ ಗುಣಮಟ್ಟ ಕಾಪಾಡಲು ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು. ಪೆಟ್ರೋಲ್ ಬಂಕುಗಳಲ್ಲಿ ಸಾರ್ವಜನಿಕರಿಗೆ ಮೋಸವಾಗದಂತೆ ನಿಗಾವಹಿಸಬೇಕು.

ಅಂಗಡಿಗಳಲ್ಲಿ ಬಳಸಲಾಗುವ ತೂಕದ ಯಂತ್ರಗಳನ್ನು ಪರಿಶೀಲಿಸಬೇಕು. ಪ್ರಮಾಣೀಕರಣ ಮಾಡಬೇಕು. ಅಗತ್ಯ ಪ್ರಮಾಣಪತ್ರಗಳನ್ನು ನೀಡಬೇಕು ಎಂಬುದಾಗಿ ಸೂಚಿಸಿದ್ದಾರೆ. ಸದ್ಯ ಸಚಿವರ ಈ ಘೋಷಣೆಯು, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ನಿರೀಕ್ಷೆಯಲ್ಲಿರುವ ಸಾವಿರಾರು ಕುಟುಂಬಗಳಿಗೆ ಭರವಸೆ ಮೂಡಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author