ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ!

ರಾಜ್ಯದ ರೈತರ ನೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಇದರಡಿ, ಕರ್ನಾಟಕದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಮೂಲಕ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ನಫೆಡ್ ಹಾಗೂ NCCF ಮೂಲಕ ತೊಗರಿ ಖರೀದಿಗೆ ತ್ವರಿತ ಅನುಮತಿ ನೀಡಬೇಕೆಂದು ಪ್ರಧಾನಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಕೃಷಿ ಸಚಿವಾಲಯವು MSP ಅಡಿಯಲ್ಲಿ ತೊಗರಿಬೇಳೆ ಖರೀದಿಸಲು ರಾಜ್ಯಕ್ಕೆ ಅಧಿಕೃತ ಅನುಮತಿ ನೀಡಿದೆ.

ಅನುಮೋದನೆಯ ಪ್ರಕಾರ, ರಾಜ್ಯದಲ್ಲಿ ನಫೆಡ್ ಹಾಗೂ NCCF ಸಂಸ್ಥೆಗಳು ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ PSS ಅಡಿಯಲ್ಲಿ ತೊಗರಿಬೇಳೆ ಸಂಗ್ರಹಿಸಲಿವೆ. 2025–26ನೇ ಸಾಲಿಗೆ ತೊಗರಿ ಬೆಳೆಗಾಗಿ ಕ್ವಿಂಟಾಲ್‌ಗೆ ₹8,000 ಅನ್ನು MSP ಆಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, “ಕರ್ನಾಟಕದ ತೊಗರಿ ಬೆಳೆಗಾರರ ನೆರವಿಗೆ ತಕ್ಷಣ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಪ್ರಸಕ್ತ ಹಂಗಾಮಿನಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು MSP ಅಡಿಯಲ್ಲಿ ಖರೀದಿಸಲು ಒಪ್ಪಿಗೆ ನೀಡಿರುವುದು ರೈತರಿಗೆ ಮಹತ್ವದ ನಿರಾಳತೆ ನೀಡಲಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author