ನ್ಯೂಯಾರ್ಕ್‌ನಿಂದ ಬಂದಿರುವ ಈ ಸುದ್ದಿ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ. ಇ–ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಮುಂದಿನ ಮೂರು ತಿಂಗಳಲ್ಲಿ ಸುಮಾರು 16 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಿಸಿದೆ.
ಈ ಕುರಿತು ಅಮೆಜಾನ್‌ನ HR ಮುಖ್ಯಸ್ಥೆ ಬೆತ್ ಗ್ಯಾಲೆಟ್ಟಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಈಗಾಗಲೇ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಂಪನಿ ಘೋಷಣೆ ಮಾಡಿತ್ತು. ಇದೀಗ ಹೊಸದಾಗಿ 16 ಸಾವಿರ ಮಂದಿಗೆ ಸೋಡಚೀಟಿ ನೀಡಲು ಮುಂದಾಗಿರುವುದರಿಂದ, ಒಟ್ಟಾರೆ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿದೆ.
ಅಮೆಜಾನ್ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಇದೇ ಮೊಟ್ಟಮೊದಲ ಬಾರಿಗೆ ನಡೆಯುತ್ತಿದೆ ಎಂಬುದು ಗಮನಾರ್ಹ. ಕೋವಿಡ್ ನಂತರದ ಆರ್ಥಿಕ ಮಂದಗತಿಯ ಪರಿಣಾಮವಾಗಿ 2023ರಲ್ಲಿ ಮಾತ್ರವೇ ಅಮೆಜಾನ್ ಸುಮಾರು 27 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ ಭಾರೀ ಮಟ್ಟದ ಲೇಆಫ್ ಘೋಷಣೆಯಾಗಿದ್ದು, ಟೆಕ್ ವಲಯದಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.
ಸ್ತುತ ಅಮೆಜಾನ್ ವಿಶ್ವದಾದ್ಯಂತ 15 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಆದರೆ ಆನ್‌ಲೈನ್ ಮಾರಾಟದ ವೃದ್ಧಿ ನಿಧಾನವಾಗಿರುವುದು, ವೆಚ್ಚ ಕಡಿತದ ಒತ್ತಡ ಮತ್ತು ಲಾಭಾಂಶ ಹೆಚ್ಚಿಸುವ ಉದ್ದೇಶದಿಂದ ಕಂಪನಿ ಈ ಕಠಿಣ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಹಿರಿಯ ಅಧಿಕಾರಿಗಳ ಪ್ರಕಾರ, ಮುಖ್ಯವಾಗಿ ಕಾರ್ಪೊರೇಟ್ ವಿಭಾಗಗಳು, ಟೆಕ್ ತಂಡಗಳು ಹಾಗೂ ಸಹಾಯಕ ಸೇವಾ ವಿಭಾಗಗಳ ಮೇಲೆ ಈ ಉದ್ಯೋಗ ಕಡಿತದ ಪ್ರಭಾವ ಬೀರುವ ಸಾಧ್ಯತೆ ಇದೆ.
ಇತ್ತೀಚಿನ ತಿಂಗಳಲ್ಲಿ ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಟೆಕ್ ಕಂಪನಿಗಳೂ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಅಮೆಜಾನ್‌ನ ಈ ನಿರ್ಧಾರ ಜಾಗತಿಕ ಟೆಕ್ ಉದ್ಯಮದಲ್ಲಿ ನಡೆಯುತ್ತಿರುವ ಉದ್ಯೋಗ ಕುಸಿತಕ್ಕೆ ಮತ್ತಷ್ಟು ಇಂಧನ ತುಂಬಿದಂತಾಗಿದೆ.
ಒಟ್ಟಿನಲ್ಲಿ, ಜಾಗತಿಕ ಆರ್ಥಿಕ ಸ್ಥಿತಿಗತಿ ಹಾಗೂ ಟೆಕ್ ವಲಯದ ಬದಲಾವಣೆಗಳ ನಡುವೆಯೇ ಸಾವಿರಾರು ಕುಟುಂಬಗಳ ಬದುಕಿನ ಮೇಲೆ ಈ ನಿರ್ಧಾರ ಪರಿಣಾಮ ಬೀರುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ




