ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಇಂಡಿಯಾ ಬ್ಲಾಕ್ ಅಥವಾ ಮಹಾಘಟಬಂಧನ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಭರ್ಜರಿಯಾಗಿ ಬಿಡುಗಡೆ ಮಾಡಿದೆ. ‘ಬಿಹಾರ್ ಕಾ ತೇಜಸ್ವಿ ಪ್ರಾಣ್’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ಈ ಪ್ರಣಾಳಿಕೆಯಲ್ಲಿ ಉದ್ಯೋಗ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಮಹಾಘಟಬಂಧನ್‌ನ ಮುಖ್ಯಮಂತ್ರಿಯಾಗಿ ಸ್ಪರ್ಧಿಸುತ್ತಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಪ್ರಣಾಳಿಕೆಯ ಬಿಡುಗಡೆ ವೇಳೆ ಮಾತನಾಡಿ, ನಾವು ಬಿಹಾರದಲ್ಲಿ ಸರ್ಕಾರ ರಚಿಸುವುದು ಮಾತ್ರವಲ್ಲ, ಹೊಸ ಬಿಹಾರವನ್ನೂ ನಿರ್ಮಿಸಬೇಕು. ಈ ಸಂಕಲ್ಪ ಪತ್ರವು ಬಿಹಾರದ ಭವಿಷ್ಯವನ್ನು ಬದಲಾಯಿಸುವ ದೃಢ ನಿಲುವಿನ ಪ್ರತೀಕವಾಗಿದೆ ಎಂದು ಹೇಳಿದರು.
ಪ್ರಣಾಳಿಕೆಯ ಪ್ರಮುಖ ಅಂಶವಾಗಿ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ಇಂಡಿಯಾ ಬ್ಲಾಕ್ ನೀಡಿದೆ. ತೇಜಸ್ವಿ ಯಾದವ್ ಅವರ ಪ್ರಕಾರ, ಸರ್ಕಾರ ರಚಿಸಿದ 20 ತಿಂಗಳೊಳಗೆ ಈ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೆ ತರಲಾಗುವುದು.
ಇದರ ಜೊತೆಗೆ, ಪ್ರಣಾಳಿಕೆಯಲ್ಲಿ ಜೀವಿಕಾ ದೀದಿಗಳಿಗೆ ಶಾಶ್ವತ ಸರ್ಕಾರಿ ಹುದ್ದೆ ನೀಡುವುದು, ಹಾಗೂ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ಹಲವು ಸಾಮಾಜಿಕ ಕಲ್ಯಾಣದ ಕ್ರಮಗಳ ಭರವಸೆ ನೀಡಲಾಗಿದೆ.
ಕಾಂಗ್ರೆಸ್ ನಾಯಕ ಪವನ್ ಖೇರಾ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಮಹಾಘಟಬಂಧನ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಎಲ್ಲರಿಗಿಂತ ಮೊದಲು ಘೋಷಿಸಿದೆ. ಈಗ ತನ್ನ ಪ್ರಣಾಳಿಕೆಯನ್ನು ಕೂಡಾ ಮೊದಲಿಗರಾಗಿ ಬಿಡುಗಡೆ ಮಾಡಿದೆ. ಇದು ಬಿಹಾರದ ಅಭಿವೃದ್ಧಿಯ ಬಗ್ಗೆ ನಮ್ಮ ಗಂಭೀರತೆಯನ್ನು ತೋರಿಸುತ್ತದೆ. ಬಿಹಾರ ರಾಜ್ಯವು ಈ ‘ಪ್ರಾಣ’ಕ್ಕಾಗಿ ಕಾಯುತ್ತಿತ್ತು. ಇಂದು ನಿಜವಾಗಿಯೂ ಶುಭ ದಿನ ಎಂದು ಅಭಿಪ್ರಾಯಪಟ್ಟರು.
ವರದಿ : ಲಾವಣ್ಯ ಅನಿಗೋಳ

