ಉಡುಪಿಯನ್ನ ಕೇಂದ್ರವಾಗಿಟ್ಟುಕೊಂಡಿರುವ ಕರ್ನಾಟಕ ರಾಜ್ಯ ಕಂಬಳ ಸಂಘ ಈಗಿನಿಂದ ಅಧಿಕೃತವಾಗಿ ರಾಜ್ಯ ಕ್ರೀಡಾ ಸಂಸ್ಥೆ ಎಂಬ ಮಾನ್ಯತೆಯನ್ನು ಪಡೆದುಕೊಂಡಿದೆ. ಅಕ್ಟೋಬರ್ 7, 2025 ರಂದು ರಾಜ್ಯ ಕ್ರೀಡಾ ಪ್ರಾಧಿಕಾರ ಹೊರಡಿಸಿದ ಆದೇಶದೊಂದಿಗೆ ಈ ಸಂಘಕ್ಕೆ ಈ ಮಹತ್ವದ ಮಾನ್ಯತೆ ಸಿಕ್ಕಿದ್ದು, ಇದರೊಂದಿಗೆ ಕಂಬಳ ಕ್ರೀಡೆ ರಾಜ್ಯದ ಮುಖ್ಯವಾಹಿನಿಯ ಕ್ರೀಡೆಗಳ ಸಾಲಿಗೆ ಸೇರಿದೆ.
ಈ ಹೊಸ ಮಾನ್ಯತೆಗೆ ಕರ್ನಾಟಕ ರಾಜ್ಯ ಕಂಬಳ ಸಂಘಕ್ಕೆ ರಾಜ್ಯದಾದ್ಯಂತ ಕಂಬಳ ಸ್ಪರ್ಧೆಗಳನ್ನು ಆಯೋಜಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಮಾರ್ಗದರ್ಶನ ನೀಡಲು ಅಧಿಕಾರ ಸಿಕ್ಕಿದೆ. ಜೊತೆಗೆ, ಸಂಘವು ಇನ್ನುಮುಂದೆ ರಾಜ್ಯ ಸರ್ಕಾರದಿಂದ ವಾರ್ಷಿಕ ಆರ್ಥಿಕ ಅನುದಾನ ಪಡೆದುಕೊಳ್ಳಲು ಅರ್ಹವಾಗಲಿದೆ. ಈ ಮಾನ್ಯತೆಯು ಮೂರು ವರ್ಷಗಳವರೆಗೆ ಅಥವಾ ಯಾವುದೇ ಹೊಸ ನಿರ್ದೇಶನ ಬರುವವರೆಗೆ ಜಾರಿಯಲ್ಲಿರುತ್ತದೆ.
ಸಂಘದ ಅಧ್ಯಕ್ಷ ಬೆಳ್ಪು ದೇವಿಪ್ರಸಾದ್ ಶೆಟ್ಟಿ ಅವರ ಪ್ರಕಾರ, ಈ ಮಾನ್ಯತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಬೆನ್ನಲ್ಲೇ ದೊರಕಿದೆ. ಕಂಬಳ ಕ್ರೀಡೆಯು ಈಗ ರಾಜ್ಯ ಕ್ರೀಡಾ ಬಜೆಟ್‌ನಲ್ಲೂ ಸೇರಿದೆ. ಇದು ಕ್ರೀಡಾ ಇಲಾಖೆಯಿಂದ ಪ್ರಾರಂಭವಾಗುವ ಎಲ್ಲಾ ಮೂಲಭೂತ ಸೌಲಭ್ಯಗಳು – ರೆಫರಿ ಭತ್ಯೆ, ಆಟಗಾರರಿಗೆ ಬೆಂಬಲ, ತರಬೇತಿ ಸೌಲಭ್ಯಗಳು ಮೊದಲಾದನ್ನು ಕಂಬಳಕ್ಕೂ ವಿಸ್ತರಿಸುತ್ತದೆ.
ಬೆಳ್ಪು ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಾಜ್ಯ ಕಂಬಳ ಸಂಘವು, ಉಪಾಧ್ಯಕ್ಷ ನವೀನ್‌ಚಂದ್ರ ಆಳ್ವ ಮತ್ತು ಕಾರ್ಯದರ್ಶಿ ವಿಜಯಕುಮಾರ್ ಸೇರಿದಂತೆ ಒಟ್ಟು 18 ಸದಸ್ಯರನ್ನು ಹೊಂದಿದೆ. ಕಂಬಳ ಋತುವು ನವೆಂಬರ್ 15 ರಿಂದ ಪ್ರಾರಂಭವಾಗಲಿದೆ. ಈ ಅಧಿಕೃತ ಮಾನ್ಯತೆಯು ಕಂಬಳ ಕ್ರೀಡೆಯ ಅಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಕಂಬಳವನ್ನು ರಾಜ್ಯದ ಪ್ರಮುಖ ಕ್ರೀಡೆಗಳಲ್ಲಿ ಒಂದಾಗಿ ಬೆಳೆಸಲು ಇದು ಸಹಕಾರಿಯಾಗಲಿದೆ.
ವರದಿ : ಲಾವಣ್ಯ ಅನಿಗೋಳ

