ನಗರ ಪಾಲಿಕೆಗಳ ಚುನಾವಣೆ ಅನಿಶ್ಚಿತತೆಯಲ್ಲಿರುವ ನಡುವೆಯೇ, ರಾಜ್ಯ ಸರ್ಕಾರ ಐದು ನಗರ ಪಾಲಿಕೆಗಳಿಗೆ 700ಕ್ಕೂ ಹೆಚ್ಚು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಮುಂದಾಗಿದೆ. ಪ್ರತಿ 20 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಮತದಾನ ಹಕ್ಕಿಲ್ಲದ ನಾಮನಿರ್ದೇಶಿತ ಸದಸ್ಯರನ್ನು ನೇಮಿಸುವ ಉದ್ದೇಶದೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಕ್ರಮ ಕೈಗೊಂಡಿದೆ.
BBMP ಯಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದು ಐದು ವರ್ಷಗಳಾದರೂ ಚುನಾವಣೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ 2025ರ ಸೆಪ್ಟೆಂಬರ್ 2ರಂದು ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024ರಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತ್ತು. ಅದೇ ದಿನ ಐದು ಹೊಸ ನಗರ ಪಾಲಿಕೆಗಳನ್ನೂ ರಚಿಸಲಾಗಿತ್ತು.
5 ನಗರ ಪಾಲಿಕೆಗಳಿಗೆ ವಾರ್ಡ್ಗಳ ಮರುವಿಂಗಡಣೆ ಅಂತಿಮವಾಗಿದ್ದರೂ, ಇನ್ನೂ ಮೀಸಲಾತಿಯನ್ನು ನಿಗದಿ ಮಾಡಿಲ್ಲ. ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ತಿದ್ದುಪಡಿ ತಂದು, ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೂ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಮುಂದಾಗಿದೆ.
ಇದರಿಂದ, ಒಟ್ಟಾರೆ ಚುನಾಯಿತ ಕಾರ್ಪೊರೇಟರ್ಗಳಿಗಿಂತ 200ಕ್ಕೂ ಹೆಚ್ಚು ನಾಮ ನಿರ್ದೇಶಿತ ಕಾರ್ಪೊರೇಟರ್ಗಳೇ ಇರಲಿದ್ದಾರೆ. ಬಿಬಿಎಂಪಿಯ ಅವಧಿಯಲ್ಲಿ 198 ಚುನಾಯಿತ ಕಾರ್ಪೊರೇಟರ್ಗಳಿದ್ದರೆ, 20 ನಾಮ ನಿರ್ದೇಶಿತ ಸದಸ್ಯರಿದ್ದರು. ಬೆಳಗಾವಿಯ ಸುವರ್ಣ ವಿಧಾನಸೌಭದಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಮಸೂದೆಯನ್ನು ಡಿ.12ರಂದು ಮಂಡಿಸಲಾಗಿದೆ.
ಚುನಾಯಿತ ಸದಸ್ಯರಿಲ್ಲದ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲು ಹೊರಟಿರುವುದು ಸಂವಿಧಾನ ವಿರೋಧಿ ಎಂಬ ಆರೋಪ ವ್ಯಕ್ತವಾಗಿದೆ. ಹೊಸ ಪ್ರದೇಶಗಳು ಸೇರಿಕೊಂಡರೆ ಮೂರು ತಿಂಗಳಲ್ಲಿ ಅವುಗಳ ವಾರ್ಡ್ಗಳನ್ನು ಮರು ವಿಂಗಡಿಸಿ, ನಗರ ಪಾಲಿಕೆಗಳಿಗೆ ಸೇರಿಸಬೇಕು. ಅಂದರೆ, ಮೂರು ತಿಂಗಳು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳೂ ನಡೆಯುವುದಿಲ್ಲ. ನಗರ ಪಾಲಿಕೆಗಳ ಚುನಾವಣೆ ಇನ್ನಾರು ತಿಂಗಳು ಮುಂದಕ್ಕೆ ಹೋದದಂತಾಗುತ್ತದೆ ಎಂದು ಹೇಳಲಾಗಿದೆ.
ವರದಿ : ಲಾವಣ್ಯ ಅನಿಗೋಳ



