ಕರ್ನಾಟಕದಲ್ಲಿ ಸಾರ್ವಜನಿಕ ದೂರು ಸಲ್ಲಿಸುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗುತ್ತಿದೆ. ನೀರು ಸರಬರಾಜಿನ ತೊಂದರೆ, ವಿದ್ಯುತ್ ವ್ಯತ್ಯಯ, ಹದಗೆಟ್ಟ ರಸ್ತೆಗಳು ಅಥವಾ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಎದುರಾಗುವ ಯಾವುದೇ ಸಮಸ್ಯೆಗೂ ಇದೀಗ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶ ದೊರೆಯಲಿದೆ. ಕರ್ನಾಟಕ ಇ-ಗವರ್ನೆನ್ಸ್ ಕೇಂದ್ರವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಡಿಸೆಂಬರ್‌ನಿಂದ ಈ ಹೊಸ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದೆ.
2021ರಿಂದ ಕಾರ್ಯನಿರ್ವಹಿಸುತ್ತಿರುವ ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಮೂಲಕ ಜನರು ವೆಬ್‌ಸೈಟ್ ಬಳಸಿ ದೂರು ಸಲ್ಲಿಸಲು ಸಾಧ್ಯವಾಗುತ್ತಿದೆ. ಆದರೆ ಹೊಸ AI ಆಧಾರಿತ ವ್ಯವಸ್ಥೆ ಹಿಂದಿನ ವ್ಯವಸ್ಥೆಗಿಂತ ಹೆಚ್ಚು ಸುಧಾರಿತ ಮತ್ತು ಜನಸ್ನೇಹಿಯಾಗಿದೆ. ಈ ನೂತನ ವ್ಯವಸ್ಥೆಯಲ್ಲಿ ನಾಗರಿಕರು ಕೇವಲ ತಮ್ಮ ಹೆಸರು, ವಿಳಾಸ ಮತ್ತು ಸಮಸ್ಯೆಯ ಸ್ವರೂಪವನ್ನು ನೀಡಿದರೆ ಸಾಕು. ಉಳಿದ ಮಾಹಿತಿಯನ್ನು AI ಸ್ವಯಂಚಾಲಿತವಾಗಿ ಸಂಗ್ರಹಿಸಿ, ಅರ್ಥಪೂರ್ಣ ದೂರು ಪತ್ರವನ್ನು ರಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುತ್ತದೆ.
ವಿಶೇಷವೆಂದರೆ, ಜನರು ತಮ್ಮ ಸಮಸ್ಯೆಯನ್ನು ಮೌಖಿಕವಾಗಿ ಹೇಳಬಹುದು ಅಥವಾ ಧ್ವನಿ ಸಂದೇಶದ ರೂಪದಲ್ಲಿಯೂ ದಾಖಲಿಸಬಹುದು. ಕೆಲವೇ ಶಬ್ಧಗಳಲ್ಲಿ ನೀಡಿದ ಮಾಹಿತಿಯನ್ನು ವ್ಯವಸ್ಥೆಯು ವಿಶ್ಲೇಷಿಸಿ, ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಸಂಪೂರ್ಣ ಪತ್ರವನ್ನು ತಯಾರಿಸುತ್ತದೆ. ChatGPT ಮಾದರಿಯ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡಿರುವ ಈ AI ವ್ಯವಸ್ಥೆ ಭಾಷೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥಪೂರ್ಣವಾಗಿ ಪತ್ರ ರಚಿಸುವ ಸಾಮರ್ಥ್ಯ ಹೊಂದಿದೆ.
ಪ್ರತಿ ದೂರಿಗೂ ವಿಶಿಷ್ಟ ಕುಂದುಕೊರತೆ ID ನೀಡಲಾಗುತ್ತದೆ ಮತ್ತು ಸಮಸ್ಯೆ ಪರಿಹಾರ ಪ್ರಕ್ರಿಯೆಗೆ ನಿಗದಿತ ಕಾಲಮಿತಿಯೂ ನಿಗದಿಯಾಗಿದೆ. ಏಳು ದಿನಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ದೂರು ಸ್ವಯಂಚಾಲಿತವಾಗಿ ಹಿರಿಯ ಅಧಿಕಾರಿಗೆ ಸಾಗುತ್ತದೆ. ಅಲ್ಲಿಯೂ ಪರಿಹಾರವಾಗದಿದ್ದರೆ, 15ನೇ ದಿನದಂದು ಅದು ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸಲಾಗುತ್ತದೆ. ಅಂತಿಮವಾಗಿ, ಒಟ್ಟು 21 ದಿನಗಳೊಳಗೆ ದೂರು ಪರಿಹರಿಸುವ ಗುರಿಯನ್ನು ಇಲಾಖೆ ನಿಗದಿಪಡಿಸಿದೆ.
ಪ್ರಸ್ತುತ ಈ ವ್ಯವಸ್ಥೆ ಪ್ರಾಯೋಗಿಕ ಹಂತದಲ್ಲಿದ್ದು, ಮುಂದಿನ ತಿಂಗಳು ಸಾರ್ವಜನಿಕ ಬಳಕೆಗೆ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಾಗಲಿರುವ ಈ AI ಆಧಾರಿತ ಕುಂದುಕೊರತೆ ಪರಿಹಾರ ವ್ಯವಸ್ಥೆ ಜನರ ಧ್ವನಿಗೆ ಹೊಸ ಶಕ್ತಿ ನೀಡಲಿದ್ದು, ನಿಮ್ಮ ಮಾತಿಗೆ ತಕ್ಷಣದ ಪ್ರತಿಕ್ರಿಯೆ ಎಂಬ ಉದ್ದೇಶದೊಂದಿಗೆ ಸರ್ಕಾರವು ಈ ಹೊಸ ಪಥವನ್ನು ತೆರೆಯುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




