Political News: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ನಡೆಯನ್ನು ಖಂಡಿಸಿ ಹಾಗೂ ಪ್ರಾಸುಕ್ಯೂಷನ್ ಹಿಂಪಡೆಯಲು ಆಗ್ರಹಿಸಿ, ಧಾರವಾಡ ಕೈ ಪಕ್ಷದ ಕಾರ್ಯಕರ್ತರು ಸೇರಿ ಜಿಲ್ಲಾ ಮುಖಂಡರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಸೇರಿ ರಾಜ್ಯದ ರಾಜ್ಯಪಾಲರ ವಿರುದ್ಧ ಧಿಕ್ಲಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ರಾಜ್ಯಪಾಲರು ಬಿಜೆಪಿ ಹೈಕಮಾಂಡ್ ಕೈಗೊಂಬೆಯಂತೆ ವರ್ತನೆ ಮಾಡುತ್ತಿದ್ದು, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಮೂಲಕ ಭಾರತ ದೇಶದ ಅಖಂಡತೆಗೆ ಧಕ್ಕೆ ತರುತ್ತಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ ಗುರಿಕಾರ, ದೀಪಕ್ ಚಿಂಚೋರೆ, ದಾನಪ್ಪ ಕಬ್ಬೇರ, ಗೌಸ್ ನವಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.