ಬ್ರಿಟಿಷ್ ವಸಾಹತುಶಾಹಿ ಪರಂಪರೆಯನ್ನು ಅಳಿಸಿಹಾಕುವ ಉದ್ದೇಶದಿಂದ ದೇಶದಾದ್ಯಂತ ಇರುವ ರಾಜ್ಯಪಾಲರ ಅಧಿಕೃತ ನಿವಾಸವಾದ ‘ರಾಜಭವನ’ ಹೆಸರನ್ನು ‘ಲೋಕ ಭವನ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಇದರ ಬೆನ್ನಲ್ಲೇ, ಕೇರಳ ರಾಜಭವನವು ಸೋಮವಾರ ಮರುನಾಮಕರಣಕ್ಕೆ ಮುಂದಾಗಿದೆ. ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಲಡಾಖ್ ರಾಜ್ಯಪಾಲರು ಈಗಾಗಲೇ ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಇದೇ ರೀತಿ, ದೆಹಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ರ ಅಧಿಕೃತ ನಿವಾಸ ‘ರಾಜ ನಿವಾಸ’ಕ್ಕೂ ‘ಲೋಕ ನಿವಾಸ’ ಎಂದು ಹೆಸರು ಬದಲಿಸಲಾಗುತ್ತಿದೆ.
2024ರ ಆಗಸ್ಟ್ 2ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ರಾಜ್ಯಪಾಲರ ಸಭೆಯಲ್ಲಿ, ತಮಿಳುನಾಡಿನ ರಾಜ್ಯಪಾಲ R.N. ರವಿ ನೇತೃತ್ವದ ಸಮಿತಿ ಮಹತ್ವದ ಶಿಫಾರಸು ಮಾಡಿತ್ತು. ಸಮಿತಿಯ ವರದಿ ಪ್ರಕಾರ ‘ರಾಜಭವನ’ ಎಂಬ ಪದ ಬ್ರಿಟಿಷರ ವಸಾಹತುಶಾಹಿ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನು ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಹೆಸರಿನಿಂದ ಪರಿವರ್ತಿಸಬೇಕು. ಈ ಶಿಫಾರಸನ್ನು ರಾಜ್ಯಪಾಲರ ಸಭೆಯೇ ಅಂಗೀಕರಿಸಿತ್ತು. ಅದನ್ನು ಆಧಾರ ಮಾಡಿಕೊಂಡು, ಕೇಂದ್ರ ಗೃಹ ಸಚಿವಾಲಯವು ದೇಶದಾದ್ಯಂತ ರಾಜಭವನಗಳಿಗೆ ‘ಲೋಕ ಭವನ’ ಎಂಬ ಹೆಸರನ್ನು ನೀಡುವಂತೆ ನಿರ್ದೇಶನ ಕಳುಹಿಸಿತ್ತು.
ದೇಶಾದ್ಯಂತ ರಾಜಭವನ ಮತ್ತು ನಿವಾಸಗಳನ್ನು ಕ್ರಮವಾಗಿ ಲೋಕ ಭವನ ಮತ್ತು ಲೋಕ ನಿವಾಸ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪಶ್ಚಿಮ ಬಂಗಾಳ ರಾಜ್ಯಪಾಲರ ವಿಶೇಷ ಕರ್ತವ್ಯ ಅಧಿಕಾರಿ C.V. ಆನಂದ ಬೋಸ್ ಮಾತನಾಡಿ, ಇನ್ನು ಮುಂದೆ, ಬಂಗಾಳದ ರಾಜಭವನಗಳು ಇನ್ನು ಮುಂದೆ ಲೋಕ ಭವನ ಎಂದು ಹೆಸರಿಸಲಾಗುವುದು ಎಂದು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ



