ಹುಬ್ಬಳ್ಳಿ/ಬೆಂಗಳೂರು: ಡಿಜಿಟಲ್ ಮಾಧ್ಯಮ ಈಗ ಸಾರ್ವಜನಿಕವಾಗಿ ಸಾಕಷ್ಟು ಪ್ರಭಾವ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಜಾಹೀರಾತುಗಳನ್ನು ಡಿಜಿಟಲ್ ಮಾಧ್ಯಮಕ್ಕೂ ವಿಸ್ತರಿಸುವ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಡಿಜಿಟಲ್ ಮಾಧ್ಯಮಕ್ಕೆ ಸರ್ಕಾರದಿಂದ ದೊರೆತಿರುವ ಗುಡ್ ನ್ಯೂಸ್ ಆಗಿದೆ.
ಹೌದು… ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳು ಹೆಚ್ಚು ಪ್ರಚಲಿತವಾಗಿದ್ದು, ಡಿಜಿಟಲ್ ಮಾಧ್ಯಮಗಳಲ್ಲಿ ಸರ್ಕಾರದ ಜಾಹೀರಾತು ಪ್ರಕಟಿತವಾದಲ್ಲಿ ಸರ್ಕಾರದ ಜಾಹೀರಾತುಗಳು ಯುವ ಸಮೂಹವನ್ನು ತಲುಪಲು ಸಹಕಾರಿಯಾಗುವುದರಿಂದ ಹಾಗೂ ಡಿಜಿಟಲ್ ಮಾಧ್ಯಮಗಳು ಇತ್ತೀಚೆಗೆ ಸರ್ಕಾರದ ಜಾಹೀರಾತು ಕೋರಿ ಇಲಾಖೆಗೆ ಮನವಿಗಳನ್ನು ಸಲ್ಲಿಸುತ್ತಿದ್ದು, ಈಗ ಶುಭ ಸುದ್ದಿ ಸಿಕ್ಕಂತಾಗಿದೆ.
ಡಿಜಿಟಲ್ ಮಾಧ್ಯಮಗಳಿಗೆ ಇಲಾಖೆಯಿಂದ ಜಾಹೀರಾತು ದರ ನಿಗದಿಯಾಗಿಲ್ಲದ ಕಾರಣ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಡಿ.ಎ.ವಿ.ಪಿ. ಸಿದ್ಧಪಡಿಸಿರುವ ನೀತಿಯನ್ನು ಪರಿಗಣನೆಗೆ ತೆಗೆದುಕೊಂಡು ಅದೇ ಮಾದರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಡಿಜಿಟಲ್ ಪಾಲಿಸಿಯನ್ನು ಸಿದ್ಧಪಡಿಸಿ ಜಾಹೀರಾತು ಪ್ರಸಾರದ ನಿಯಮಗಳಿಗೆ ಸರ್ಕಾರದ ಅನುಮೋದನೆ ನೀಡಿ ಆದೇಶ ಹೊರಡಿಸುವಂತೆ ಕೋರಲಾಗಿತ್ತು. ಈಗ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಡಿಜಿಟಲ್ ಮಾಧ್ಯಮದಲ್ಲಿಯೂ ಕೂಡ ಈಗ ಸರ್ಕಾರದ ಜಾಹೀರಾತು ಪ್ರಸಾರಗೊಳ್ಳಲಿವೆ.
ಇತ್ತೀಚಿನ ಕೆಲವು ವರ್ಷಗಳಿಂದ ಮಾಧ್ಯಮದ ವ್ಯಾಪ್ತಿ ಬದಲಾಗಿದ್ದು, ಅಂತರ್ಜಾಲ, ಖಾಸಗಿ ಕಂಪ್ಯೂಟರ್, ಸ್ಮಾರ್ಟ್ ಟಿವಿ ಹಾಗೂ ಸ್ಮಾರ್ಟ್ ಫೋನ್‌ಗಳ ಮುಖಾಂತರ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವುದರಿಂದ ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದರೆ ಡಿಜಿಟಲ್ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುವುದರಿಂದ ಸರ್ಕಾರಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಜಾಹೀರಾತುಗಳಲ್ಲಿ ಈಗ ಡಿಜಿಟಲ್ ಜಾಹೀರಾತುಗಳ ಸಿಂಹಪಾಲು ಪಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ, ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ತಲುಪಿಸಲು ಡಿಜಿಟಲ್ ಜಾಹೀರಾತು ವ್ಯವಸ್ಥೆಯನ್ನು ಬಳಸಿಕೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತೀರ್ಮಾನಿಸಿ ನವೀನ ವಿದ್ಯುನ್ಮಾನ ಮಾಧ್ಯಮ ಹಾಗೂ ಸೈಬರ್ ಮಾಧ್ಯಮವನ್ನು ಸರ್ಕಾರದ ಜಾಹೀರಾತಿಗಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.