Hubli News: ಹುಬ್ಬಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ ಘಟ್ಟ ಎಂದರೇ ಪದವಿ ಪ್ರದಾನ. ಅದೆಷ್ಟೋ ದಿನಗಳ ಓದಿನ ಶ್ರಮಕ್ಕೆ ಪೂರಕವಾಗಿ ಪಡೆಯುವ ಅದೊಂದು ಪದವಿ ಪ್ರದಾನದ ಸಂಭ್ರಮದ ಖುಷಿಯಂತೂ ಹೇಳ ತೀರದಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿ ಕೂಗಳತೆಯ ದೂರದಲ್ಲಿರುವ ವರೂರಿನಲ್ಲಿ ಇಂತಹದೊಂದು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದ ಸಭಾ ಭವನದಲ್ಲಿ ಏರ್ಪಡಿಸಿದ್ದ ಎ.ಜಿ.ಎಂ. ಸಮೂಹ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳ ವಿವಿಧ ಕೋರ್ಸ್‌ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಸಚಿವ ಸಂತೋಷ ಲಾಡ್ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸರ್ಕಾರ ಮತ್ತು ರಾಜಕೀಯ ಚಟುವಟಿಕೆಗಳನ್ನು ಯುವಕರು ಸಮೀಪದಿಂದ ನೋಡಬೇಕು. ಅಲ್ಲದೆ, ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸುವ ಗುಣ ಬೆಳೆಸಿಕೊಳ್ಳಬೇಕು. ರಾಜಕಾರಣದಿಂದ ಯುವಕರು ದೂರವಿದ್ದಷ್ಟೂ ದೇಶಕ್ಕೆ ನಷ್ಟ ಎಂಬುದನ್ನು ಅರಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಯುವ ಸಮುದಾಯಕ್ಕೆ ಸಂದೇಶವನ್ನು ನೀಡಿದರು.
ಇನ್ನೂ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸಾಧನೆ ತೋರಿ ಪದವಿ ಪಡೆಯುತ್ತಿರುವುದು ಸಂತಸದ ಸಂಗತಿ. ಪಾಲಕರು ನಿಮ್ಮ ಮೇಲೆ ಅಪಾರ ಆಸೆ, ನಂಬಿಕೆ ಇಟ್ಟುಕೊಂಡಿದ್ದಾರೆ. ಅವರಿಗೆ ನೋವು ತರದೇ ಶಿಕ್ಷಣದಲ್ಲಿ ಸಾಧನೆ ತೋರುವ ಮೂಲಕ ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಬೇಕೆಂದು ಆಶೀರ್ವದಿಸಿದರು.
ಮಹಾಮಸ್ತಕಾಭಿಷೇಕದಲ್ಲಿ ಅಮೆರಿಕ ಸೇರಿದಂತೆ ಅನ್ಯ ರಾಷ್ಟ್ರಗಳಿಂದ ಸಾವಿರಾರು ಪ್ರಮುಖರು, ಸರ್ವಧರ್ಮದ ಸಾವಿರಾರು ಸ್ವಾಮೀಜಿಗಳು, ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು. ಬಳಿಕ ಸಚಿವ ಸಂತೋಷ ಲಾಡ್ ಅವರಿಗೆ ‘ಶ್ರಮಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ವಿವಿಧ ಕೋರ್ಸ್ ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಜಿಎಂ ಸಂಸ್ಥೆ ಅಧ್ಯಕ್ಷ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ