ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ, ಜಮಖಂಡಿ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ರಾಜ್ಯ ಸರ್ಕಾರ, ಹಣಕಾಸು ಇಲಾಖೆ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ಜಗದೀಶ್ ಗುಡಗುಂಟಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ವಿಪಕ್ಷ ಶಾಸಕರಿಗೆ ಕೇವಲ 25 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೂಡಾ ಇದೇ ಆರೋಪವನ್ನು ಹಿಂದೆಯೇ ಮಾಡಿದ್ದವು.
ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗಾಗಿ ಈ ವರ್ಷ 56,000 ಕೋಟಿ ರೂ. ವೆಚ್ಚ ಮಾಡಿದ ಕಾರಣದಿಂದ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ನಿಧಿಯಲ್ಲಿ 5,229 ಕೋಟಿ ರೂ. ಕಡಿತ ಉಂಟಾಗಿದೆ ಎಂಬುದನ್ನು ಸಿಎಜಿ ವರದಿ ಉಲ್ಲೇಖಿಸಿದೆ. ಇದರ ನಡುವೆ ಜೆಡಿಎಸ್ ಶಾಸಕ ವೆಂಕಟಶಿವರೆಡ್ಡಿ ಕೂಡ ತಮ್ಮ ಕ್ಷೇತ್ರಕ್ಕೆ ಅನುದಾನ ನೀಡದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಇಲ್ಲವೆಂದಿದ್ದಾರೆ. ಎಷ್ಟು ಕೊಡಬೇಕೋ ಅಷ್ಟೇ ಕೊಟ್ಟಿದ್ದೇವೆ. ಸುಳ್ಳು ಆರೋಪ ಮಾಡಬಾರದು. ಬಿಜೆಪಿ ಅಧಿಕಾರದಲ್ಲಿದ್ದಾಗ ಅನುದಾನ ನೀಡಿದ್ದರಾ? ಅಂದಾಗ ಏನೂ ಮಾಡದವರು ಈಗ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ. ಕೋರ್ಟ್ ತೀರ್ಮಾನ ಏನೇ ಆಗಲಿ, ಸರ್ಕಾರದ ಕ್ರಮ ನ್ಯಾಯಸಮ್ಮತ ಎಂಬ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

