Political News: ಜನ ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಸದಸ್ಯರಾದ ಕೇಶವ ಪ್ರಸಾದ್.ಎಸ್ ಅವರ ಚುಕ್ಕಿ ಗುರುತಿನ ಪ್ರಶ್ನೆಗೆ ಉತ್ತರಿಸುವ ವೇಳೆ ಸಚಿವರು ಈ ಮಾಹಿತಿ ನೀಡಿದರು.
ಕೃಷಿ ಹೊಂಡಕ್ಕೆ ಆಕಸ್ಮಿಕ ಕಾಲು ಜಾರಿ ಬಿದ್ದು ಸಾವು ನೋವು ಉಂಟಾದ ಘಟನೆಗಳ ಬಗ್ಗೆ ವರದಿಯಾಗಿವೆ ಇದನ್ನು ಸಂಪೂರ್ಣ ನಿಯಂತ್ರಿಸಲು ಸುತ್ತಲೂ ಬೇಲಿ ನಿರ್ಮಾಣಕ್ಕೆ ಕೃಷಿ ಭಾಗ್ಯ ಯೋಜನೆಯಡಿ ಅನುದಾನ ಒದಗಿಸಲಾಗುತ್ತಿದೆ ಎಂದರು.
33686 ಕೃಷಿ ಹೊಂಡ ನಿರ್ಮಾಣ
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿವಿಧ ಯೋಜನೆಗಳಡಿಗಳಲ್ಲಿ 33686 ಕೃಷಿ ಹೊಂಡಗಳನ್ನ ನಿರ್ಮಿಸುವ ಮೂಲಕ ರೈತರಿಗೆ ನೆರವಾಗಲಾಗಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
ಕೃಷಿ ಭಾಗ್ಯ ಯೋಜನೆ 2021-22 ಹಾಗೂ 2022- 23 ನೇ ಸಾಲಿನಲ್ಲಿ ಚಾಲ್ತಿಯಲ್ಲಿ ಇರಲಿಲ್ಲ.2023-24 ನೇ ಸಾಲಿನಲ್ಲಿ 6601 ಕೃಷಿ ಹೊಂಡಗಳನ್ನು 2332.75. ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಚಲುವರಾಯಸ್ವಾಮಿ ವಿವರಿಸಿದರು.
ಇದೇ ರೀತಿ ಜಲಾನಯನ ಅಭಿವೃದ್ಧಿ ಇಲಾಖೆಯಿಂದ 2022-23 ನೇ ಸಾಲಿನಲ್ಲಿ 285 2023-24 ನೇ ಸಾಲಿನಲ್ಲಿ 3483 ಸೇರಿದಂತೆ 1297.87 ಲಕ್ಷ ರೂಪಾಯಿ ವೆಚ್ಚದಲ್ಲಿ 3768 ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 2021-22 ಸಾಲಿನಲ್ಲಿ 10712, ಹಾಗೂ 2022-23 ರಲ್ಲಿ 7103 ಮತ್ತು 2023-24 ನೇ ಸಾಲಿನಲ್ಲಿ 5787 ಕೃಷಿ ಹೊಂಡ ಸೇರಿದಂತೆ 18874.96 ಲಕ್ಷ ವೆಚ್ಚದಲ್ಲಿ 23317 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ..
ಮೂರು ವರ್ಷಗಳ ಅವಧಿಯಲ್ಲಿ 22505.53 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 33686 ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಕೆಂಪು ಮಣ್ಣಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸಾಮನ್ಯ ವರ್ಗದವರಿಗೆ ಶೇ 80 ರಷ್ಟು ಸಹಾಯ ಧನ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇ 90 ರಷ್ಟು ಸಹಾಯಧನ ನೀಡಲಾಗುವುದು ಎಂದು ಸಚುವರು ವಿವರ ಒದಗಿಸಿದರು.
ಕೆಂಪು ಮಣ್ಣಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು 10*10*3 ಅಳತೆ 22494.0 ಮತ್ತು 12*12*3 ಅಳತೆ 28165.0 ಮತ್ತು 15*15*3 ಅಳತೆ 42079.0 ಹಾಗೂ 18*18*3 ಅಳತೆ 56311 ಹಾಗೂ 21*21*3 ಅಳತೆ 79034 ವೆಚ್ಚವಾಗಲಿದೆ.
ಇದೇ ರೀತಿ ಕಪ್ಪು ಮಣ್ಣಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು 12*12*3 ಅಳತೆಯ 24468 ಹಾಗೂ 15*15*3 ಅಳತೆ 36796 ಹಾಗೂ 18*18*3 ಅಳತೆ 49424 ಮತ್ತು 21*21*3 ಅಳತೆ 70551 ವೆಚ್ಚವಾಗಲಿದೆ.
ಕೃಷಿ ಇಲಾಖೆಯ 2023 – 24 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯ ಅನುಷ್ಠಾನ ಮಾರ್ಗಸೂಚಿಯನ್ವಯ ರೈತರು ಸ್ವತಃ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕಾಗಿದ್ದು, ಯಾವುದೇ ಬಾಹ್ಯ ಸಂಸ್ಥೆಗಳಿಂದ ಕೃಷಿ ಹೊಂಡ ನಿರ್ಮಿಸಲು ಅವಕಾಶವಿರುವುದಿಲ್ಲ. ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಕರ್ನಾಟಕದ ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಯನ್ನು ಸ್ಥಾಪಿಸಲು, ಹಾಗೂ ಮಳೆಯಾಶ್ರಿತ ರೈತರ ಜೀವನಮಟ್ಟವನ್ನು ಉತ್ತಮಪಡಿಸಲು 2014 – 15 ರಿಂದ 2020-21 ರವರೆಗೆ ಅನುಷ್ಠಾನ ಮಾಡಲಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು 2023-24 ನೇ ಸಾಲಿನಿಂದ ಮರುಜಾರಿಗೆ ತರಲಾಗಿದೆ.




