political news:
ಇದೇ ವರ್ಷದ ಜನವರಿ 11 ರಂದು ಸಿಎಂ ಬೊಮ್ಮಾಯಿ ಅವರು ಇಂದು ತಮ್ಮ ರೇಸ್ ಕೋರ್ಸ್ ನ ಅಧಿಕೃತ ನಿವಾಸದಲ್ಲಿ ಸ್ಮಶಾನ ಕಾರ್ಮಿಕರೊಂದಿಗೆ ಬೆಳಗಿನ ಉಪಹಾರ ಸೇವಿಸಿದ್ದರು.
ಸ್ಮಶಾನದ ಕೆಲಸಗಾರರಿಗೆ ನೌಕರಿ ಖಾಯಂಗೊಳಿಸಿದ ಸಿಎಂ, 40 ಸಾವಿರ ಪೌರ ಕಾರ್ಮಿಕರ ಖಾಯಂ ಮಾತಿಗೆ ಚಿಂತನೆ ನಡೆದಿದೆ ಎಂದು ಹೇಳಿದ್ದರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುವ ಓರ್ವ ವ್ಯಕ್ತಿ ಪ್ರಶಸ್ತಿ ಪಡೆದ. ಆಗ ಅವರನ್ನು ಕರೆದು ಮಾತನಾಡಿಸಿದೆ. ನಿಮಗೆ ಎಷ್ಟು ಸಂಬಳ ಬರುತ್ತದೆ ಅಂತ ವಿಚಾರಿಸಿದೆ. ಆಗ ಆತ ಸಂಬಳ ಅಲ್ಲ ಸರ್, ನಮ್ಮದು ನೌಕರಿನೇ ಅಲ್ಲ ಎಂದ. ಇದನ್ನು ಕೇಳಿ ನನಗೆ ಬಹಳ ನೋವಾಯಿತು. ಸಮಸ್ಯೆ ಕೇಳಿ ಅವರಿಗೆ ಒಂದು ಸೌಲಭ್ಯ ಕೊಡುವ ನಿರ್ಣಯ ಮಾಡಿದೆ ಅಂತ ಹೇಳಿದ್ದರು.
ಬೆಂಗಳೂರಿನಲ್ಲಿ 117 ಜನರಿಗೆ ಸೇವೆ ಖಾಯಂ ಮಾಡಿದ್ದೇವೆ. ಇನ್ನು ಉಳಿದ 30 ಜನರಿಗೆ ಖಾಯಂ ನೇಮಕಾತಿ ಆದೇಶ ಹೊರಡಿಸುತ್ತೇನೆ. 30 ಜನರದ್ದು ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಅದನ್ನು ಪರಿಶೀಲನೆ ಮಾಡುತ್ತೇವೆ. ಇತ್ತೀಚಿಗೆ ಪೌರ ಕಾರ್ಮಿಕರನ್ನು ಸಹ ಖಾಯಂ ಗೊಳಿಸಿದ್ದೇವೆ. 40 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಚಿಂತನೆ ಇದೆ. ಅದನ್ನ ನಾವು ಮಾಡುತ್ತೇವೆ. ಈಗಾಗಲೇ 11 ಸಾವಿರ ಪೌರಕಾರ್ಮಿಕರನ್ನ ಖಾಯಂ ಮಾಡಿದ್ದೇವೆ. ಇನ್ನುಳಿದ ಕಾರ್ಮಿಕರನ್ನೂ ಸಹ ಖಾಯಂ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಬಡವರ ಪರ ಕಾಳಜಿ ಇರುವ ಸರ್ಕಾರ ನಮ್ಮದು. ಇಷ್ಟು ವರ್ಷ ಯಾರು ಇವರ ಕಡೆ ತಿರುಗಿ ನೋಡಿಲ್ಲ. ರಾಜ್ಯ ಆಳುವವರೇ ಆಗಲಿ, ಅಧಿಕಾರಿಯೇ ಆಗಲಿ, ತಿರುಗಿ ನೋಡಿಲ್ಲ. ಆದರೆ, ಸಮಾಜದ ಹಿತ ಕಾಯುವ ಸರ್ಕಾರಗಳು ಬಂದರೆ ಈ ರೀತಿಯ ನಿರ್ಣಯಗಳು ಆಗುತ್ತವೆ. ಬಡವರ ಪರ ಕಳಕಳಿ ಇರುವಂತಹ ಸರ್ಕಾರ ನಮ್ಮದು. ಸ್ಮಶಾನ ಕಾರ್ಮಿಕರು ಎಲ್ಲರಿಗೂ ಮುಕ್ತಿ ಕೊಡುವ ಕೆಲಸ ಮಾಡುತ್ತಾರೆ. ಇವರು ಇಲ್ಲ ಅಂದರೆ ನಮಗೆ ಮುಕ್ತಿಯೇ ಸಿಗುವುದಿಲ್ಲ. ಇವರನ್ನು ಸ್ಮಶಾನ ಕಾರ್ಮಿಕರು ಅಂತಾ ಹೇಳಬೇಡಿ, ಸತ್ಯ ಹರಿಶ್ಚಂದ್ರ ಬಳಗ ಎಂದು ಇನ್ಮುಂದೆ ಕರೆಯಬೇಕು ಎಂದು ಸ್ಥಳದಲ್ಲಿದ್ದ ಬಿಬಿಎಂಪಿ ಕಮಿಷನರ್ಗೆ ಸಿಎಂ ಬೊಮ್ಮಾಯಿ ಅವರು ಸೂಚಿಸಿದ್ದರು.