Wednesday, September 24, 2025

Latest Posts

ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತಿಸಿದ ಗೃಹಲಕ್ಷ್ಮಿ ಫಲಾನುಭವಿ

- Advertisement -

ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ದೊರಕುತ್ತಿದ್ದ 2 ಸಾವಿರ ರೂಪಾಯಿಗಳನ್ನು ಒಟ್ಟುಗೂಡಿಸಿಕೊಂಡಿದ್ದ ಫಲಾನುಭವಿ ಪಾರ್ವತಮ್ಮ ಅವರು, ಆ ಹಣವನ್ನು ತಮ್ಮ ಮನೆಯಲ್ಲಿ ವಿಶೇಷ ನೆನಪಿಗಾಗಿ ಬಳಸಿದ್ದಾರೆ. 28 ಸಾವಿರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಹೊಸ ಕಟ್ಟಿಗೆ ಬಾಗಿಲಿನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಂತಿರುವ ಭಂಗಿಯ ಚಿತ್ರ ಹಾಗೂ ಅವರ ಹೆಸರು ಕೆತ್ತಿಸುವ ಮೂಲಕ ತಮ್ಮ ಅಭಿಮಾನವನ್ನು ತೋರಿಸಿದ್ದಾರೆ.

ವಿಜಯನಗರ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಅಂಗಡಿ ಕೆ.ಎಂ. ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ದಂಪತಿಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬಹಳ ದಿನಗಳಿಂದ ವಿಶೇಷ ಪ್ರೀತಿ ಮತ್ತು ಅಕ್ಕರೆ ಇತ್ತು. ಬಡವರ ಆರ್ಥಿಕಾಭಿವೃದ್ಧಿಗಾಗಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಅವರ ಹೃದಯ ಗೆದ್ದಿದ್ದವು. ಆ ಭಾವನೆಯನ್ನು ಅವರು ತಮ್ಮ ಮನೆಯ ಹೊಸ ಬಾಗಿಲಿನ ಮೂಲಕ ಎಲ್ಲರಿಗೂ ತೋರಿಸಿದರು.

ಪಾರ್ವತಮ್ಮ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದು, 15 ತಿಂಗಳಿನಿಂದ ಬಂದ ಹಣವನ್ನು ಕೂಡಿಸಿಕೊಂಡಿದ್ದರು. ಹಳೆಯ ಬಾಗಿಲು ಹಾಳಾದ ಕಾರಣ, ಹೊಸದನ್ನು ಮಾಡಿಸಲು ನಿರ್ಧರಿಸಿದರು. 28 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಬಾಗಿಲಿನ ಮೇಲೆ ‘ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಕೆತ್ತಿಸಲಾಯಿತು. ಜೊತೆಗೆ ಬಾಗಿಲಿನ ಮಧ್ಯದಲ್ಲಿ ಸಿಎಂ ಅವರ ನಿಂತಿರುವ ಭಂಗಿಯ ಉಬ್ಬು ಚಿತ್ರ ಹಾಗೂ ಕೆಳಭಾಗದಲ್ಲಿ ಗೃಹಲಕ್ಷ್ಮಿ ಯೋಜನೆ ಎಂಬ ಬರಹವನ್ನೂ ಹಾಕಲಾಗಿದೆ.

ಈ ಬಾಗಿಲು 2 ದಿನಗಳ ಹಿಂದಷ್ಟೇ ಅಳವಡಿಸಲಾಗಿದ್ದು, ಈಗಾಗಲೇ ಸುತ್ತಮುತ್ತಲಿನವರ ಗಮನ ಸೆಳೆಯುತ್ತಿದೆ. ಗ್ರಾಮದ ಬಡಗಿ ದುರುಗೇಶ್ ಅವರು ಈ ವಿಶೇಷ ಬಾಗಿಲು ತಯಾರಿಸಿದ್ದು, ತಿಪ್ಪೇಸ್ವಾಮಿ–ಪಾರ್ವತಮ್ಮ ದಂಪತಿ ಇದನ್ನು ಹೆಮ್ಮೆಯಿಂದ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ ಅಂದ್ರೆ ನಮಗೆ ಪ್ರಾಣ. ಪ್ರತಿದಿನ ಬೆಳಗ್ಗೆ ಅವರ ಮುಖ ನೋಡಿ ದಿನ ಆರಂಭಿಸಬೇಕೆಂಬ ಹಾರೈಕೆಯಿಂದಲೇ ಈ ಬಾಗಿಲು ಮಾಡಿಸಿದ್ದೇವೆ ಎಂದು ಅವರು ಸಂತೋಷ ಹಂಚಿಕೊಂಡಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss