ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹ ಲಕ್ಷ್ಮೀ ಯೋಜನೆಯನ್ನು ಯಶಸ್ವಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 198 ವಾರ್ಡ್ ಕಛೇರಿಗಳಲ್ಲಿ ನೊಂದಾವಣೆ ಹಾಗೂ ಸಹಾಯ ಕೇಂದ್ರಗಳನ್ನು ತೆರೆದು ಅರ್ಜಿ ನೋಂದಾಯಿಸುವ ವ್ಯವಸ್ಥೆ ಮಾಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹ ಲಕ್ಷ್ಮೀ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ನಡೆದ ವರ್ಚ್ಯುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆಯ ಎಲ್ಲಾ ವಾರ್ಡ್ ಕಛೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ವಲಯ ಮಟ್ಟದ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆ ಸಮನ್ವಯ ಸಾಧಿಸುವ ಸಲುವಾಗಿ ಕಂದಾಯ ವಿಭಾಗದ ಉಪ ಆಯುಕ್ತರಾದ ಲಕ್ಷ್ಮೀದೇವಿ ರವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು.
ಪಾಲಿಕೆಯ 198 ವಾರ್ಡ್ ಗಳಲ್ಲಿ ಸ್ಥಾಪಿಸುವ ಸಹಾಯ ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳು ತೆರಳಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಸಂಬಂಧ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಗೃಹ ಲಕ್ಷ್ಮೀ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ನೊಂದಾಯಿಸಿ ಫಲಾನುಭವಿಗಳಿಗೆ ಮಂಜುರಾತಿ ಪತ್ರವನ್ನು ನೀಡುವ ಸಲುವಾಗಿ ಸಿಬ್ಬಂದಿಗೆ ಸರಿಯಾದ ತರಬೇತಿಯನ್ನು ನೀಡಬೇಕು. ಜೊತೆಗೆ ಅದಕ್ಕೆ ಬೇಕಾದಂತಹ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ವಾರ್ಡ್ ಕಛೇರಿ ಮುಂಭಾಗವೂ ಗೃಹ ಲಕ್ಷ್ಮೀ ನೋಂದಣಿ ಕೇಂದ್ರ ಎಂಬ ಬ್ಯಾನರ್ ಅನ್ನು ಅಳವಡಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಡಿಯೋ, ವೀಡಿಯೋ ಕ್ಲಿಪ್ಸ್ ಪಡೆದು ನಗರದ ಜನದಟ್ಟಣೆ/ಜನನಿಬಿಡಿದ ಪ್ರದೇಶ, ಕೊಳಗೇರಿ ಪ್ರದೇಶಗಳಲ್ಲಿ ಹೆಚ್ಚಿನ ಪ್ರಚಾರ ನೀಡಿ ಎಲ್ಲಾ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವೆಬ್‌ಸೈಟ್ ನಲ್ಲಿ ಮಾಹಿತಿ ಹಾಕಿ:
ಪಾಲಿಕೆಯ ವಾರ್ಡ್ ಕಛೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದಿರುವ ಸಂಬಂಧ ವಾರ್ಡ್ ಕಛೇರಿಗಳ ವಿಳಾಸ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್ ನಲ್ಲಿ ವಿವರ ಸಹಿತ ಮಾಹಿತಿಯನ್ನು ಹಾಕಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
DKS City rounds: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ರೌಂಡ್ಸ್