GST 2.0 ಗಿಪ್ಟ್ : ಮಹೀಂದ್ರಾ ಥಾರ್ ಬೆಲೆಯಲ್ಲಿ ಕ್ರೇಜಿ ಇಳಿಕೆ!

ಹೊಸ ಜಿಎಸ್‌ಟಿ ದರಗಳು ನವರಾತ್ರಿಗೂ ಮುನ್ನ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ. ಆದರೆ, ಮಹೀಂದ್ರಾ & ಮಹೀಂದ್ರಾ ಕಂಪನಿ ತನ್ನ ಗ್ರಾಹಕರಿಗೆ ವಿಶೇಷ ಸರ್ಪ್ರೈಸ್ ನೀಡಿದೆ. ಜಿಎಸ್‌ಟಿ ಇಳಿಕೆಯ ಲಾಭವನ್ನು ಕಾಯದೆ, ಸೆಪ್ಟೆಂಬರ್ 6ರಿಂದಲೇ ತಮ್ಮ ಎಲ್ಲಾ ಐಸಿಇ ವಾಹನಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಘೋಷಿಸಿದೆ.

ಈ ಹೊಸ ಬದಲಾವಣೆಯಿಂದ ಗ್ರಾಹಕರು ಈಗ ಮಹೀಂದ್ರಾ ಕಾರುಗಳನ್ನು ಖರೀದಿಸುವಾಗ ಗರಿಷ್ಠ 1.56 ಲಕ್ಷ ರೂಪಾಯಿವರೆಗೆ ಉಳಿಸಿಕೊಳ್ಳಬಹುದಾಗಿದೆ. ಕಂಪನಿಯು ಸ್ಪಷ್ಟಪಡಿಸಿರುವಂತೆ, ಈ ದರ ಇಳಿಕೆ ಈಗಾಗಲೇ ಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾರಿಗೆ ಬಂದಿದೆ. ಹೊಸ ಜಿಎಸ್‌ಟಿ ನಿಯಮಗಳ ಪ್ರಕಾರ, 4 ಮೀಟರ್‌ಗಿಂತ ಕಡಿಮೆ ಉದ್ದದ ಮತ್ತು ಸಣ್ಣ ಎಂಜಿನ್‌ಗಳನ್ನು ಹೊಂದಿರುವ ವಾಹನಗಳ ಮೇಲಿನ ತೆರಿಗೆ 28%ರಿಂದ 18%ಕ್ಕೆ ಇಳಿಕೆಯಾಗಿದೆ. ಇದುವರೆಗೆ ಇಂತಹ ವಾಹನಗಳ ಮೇಲೆ ವಿಧಿಸಲಾಗುತ್ತಿದ್ದ 1% ಹೆಚ್ಚುವರಿ ಸೆಸ್‌ನ್ನೂ ತೆಗೆದುಹಾಕಲಾಗಿದೆ.

ದೊಡ್ಡ ಎಂಜಿನ್‌ ಇರುವ ಎಸ್‌ಯುವಿಗಳಿಗೆ ಮೊದಲು 28% ಜಿಎಸ್‌ಟಿ ಜೊತೆಗೆ 22% ಸೆಸ್ ವಿಧಿಸಲಾಗುತ್ತಿತ್ತು. ಈಗ ಅದನ್ನು ರದ್ದು ಮಾಡಿ ಕೇವಲ 40% ಜಿಎಸ್‌ಟಿ ಮಾತ್ರ ವಿಧಿಸಲಾಗುತ್ತಿದೆ. ಕೃಷಿ ಉಪಕರಣಗಳ ಮೇಲಿನ ತೆರಿಗೆಯೂ 12%ರಿಂದ 5%ಕ್ಕೆ ಇಳಿಕೆಯಾಗಿದೆ. ಜೊತೆಗೆ, ಎಲ್ಲ ಆಟೋ ಭಾಗಗಳ ಮೇಲೂ ಒಂದೇ ತರದ 18% ಜಿಎಸ್‌ಟಿ ಜಾರಿಯಾಗಿದೆ.

ಬೊಲೆರೊ ಮತ್ತು ನಿಯೋ ಖರೀದಿಸುವ ಗ್ರಾಹಕರು ಸುಮಾರು ₹1.27 ಲಕ್ಷ, XUV3XO ಪೆಟ್ರೋಲ್ ಮಾದರಿಯಲ್ಲಿ ₹1.40 ಲಕ್ಷ, ಡೀಸೆಲ್ ಮಾದರಿಯಲ್ಲಿ ₹1.56 ಲಕ್ಷವರೆಗೆ ಪ್ರಯೋಜನ ಪಡೆಯಲಿದ್ದಾರೆ. ಥಾರ್ 2WD (ಡೀಸೆಲ್) ಮೇಲೆ ₹1.35 ಲಕ್ಷ, 4WD ಮೇಲೆ ₹1.01 ಲಕ್ಷ ಇಳಿಕೆಯಾಗಿದೆ. ಥಾರ್ ರಾಕ್ಸ್ ಬೆಲೆಯೂ ₹1.33 ಲಕ್ಷವರೆಗೆ ಕಡಿಮೆಯಾಗಿದೆ. ಸ್ಕಾರ್ಪಿಯೋ ಕ್ಲಾಸಿಕ್ ಮೇಲೆ ₹1.01 ಲಕ್ಷ, ಸ್ಕಾರ್ಪಿಯೋ-ಎನ್ ಮೇಲೆ ₹1.45 ಲಕ್ಷ, ಹಾಗೂ XUV700 ಮೇಲೆ ₹1.43 ಲಕ್ಷವರೆಗೆ ಕಡಿತ ಜಾರಿಯಾಗಿದೆ.

ಅಂತೆಯೇ, ಮಹೀಂದ್ರಾ ಕಂಪನಿಯು ಇತ್ತೀಚಿನ ಜಿಎಸ್‌ಟಿ ಕಡಿತದ ಸಂಪೂರ್ಣ ಲಾಭವನ್ನು ತನ್ನ ಗ್ರಾಹಕರಿಗೆ ತಕ್ಷಣದಿಂದ ವರ್ಗಾಯಿಸುವುದಾಗಿ ಸ್ಪಷ್ಟಪಡಿಸಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author