Tuesday, December 24, 2024

Latest Posts

ಗ್ಯಾರಂಟಿ ಯೋಜನೆಗಳಿಗೆ ಬೀಳುತ್ತಾ ಕತ್ತರಿ?

- Advertisement -

ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೀಗ ಇದೇ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಬೀಳುತ್ತಾ ಎಂಬ ಪ್ರಶ್ನೆ ಉದ್ಭವಗೊಂಡಿದೆ.
ಗ್ಯಾರಂಟಿ ಯೋಜನೆಗಳ ಸ್ವರೂಪದಲ್ಲಿ ಬದಲಾವಣೆ ಮಾಡಬೇಕು ಎಂದು ಸಚಿವರೇ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ. ಈ ಯೋಜನೆಗಳ ವ್ಯಾಪ್ತಿಯಿಂದ ಶ್ರೀಮಂತರನ್ನು ಹೊರಗಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಆಗಿರೋ ರಣದೀಪ್ ಸಿಂಗ್ ಸುರ್ಜೇವಾಲಾ, ನವದೆಹಲಿಯಲ್ಲಿ ಭೇಟಿ ಮಾಡಿದ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎಚ್.ಮುನಿಯಪ್ಪ ಅವರು, ಗ್ಯಾರಂಟಿಯ ಸಾಧಕ ಬಾಧಕ, ಲೋಪದೋಷಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಜತೆಗೆ ಚರ್ಚಿಸುವುದಾಗಿ ಸುರ್ಜೇವಾಲಾ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ ₹59 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಈ ಯೋಜನೆಗಳ ಅನುಷ್ಠಾನದಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದು ಹಲವು ಶಾಸಕರು ಅಳಲು ತೋಡಿಕೊಂಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಹಾಗೂ ಅಭಿವೃದ್ದಿ ಕಾರ್ಯಗಳು ಜತೆ ಜತೆಯಾಗಿ ಸಾಗಬೇಕು ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

ಮುಖ್ಯವಾಗಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳೇ ಐದು ಗ್ಯಾರಂಟಿಗಳ ಕುರಿತು ಲೇವಡಿ ಮಾಡ್ತಿದ್ದಾರೆ. ಜೊತೆ ಶ್ರೀಮಂತರು ಕೂಡ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಶ್ರೀಮಂತರಿಗೆ ಕೊಡುತ್ತಿರುವ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಬೇಕು. ಅದರಿಂದ ಸರ್ಕಾರಕ್ಕೆ 20 ಸಾವಿರ ಕೋಟಿ ಉಳಿತಾಯವಾಗಲಿದೆ. ಹಾಗೆಯೇ, ಗ್ಯಾರಂಟಿ ಯೋಜನೆಗಳಿಂದ ಲೋಕಸಭಾ ಚುನಾವಣೆಯಲ್ಲಿ ನಮಗೆ ಲಾಭವಾಗಿಲ್ಲ. ನಾವು 15 ಸೀಟುಗಳನ್ನು ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿದ್ವಿ. ಆದ್ರೆ, ನಾವು ಗೆದ್ದಿದ್ದು ಮಾತ್ರ 9 ಸ್ಥಾನಗಳು ಮಾತ್ರ. ಗ್ಯಾರಂಟಿ ಯೋಜನೆಗಳು ನಮಗೆ ಮತಗಳಾಗಿ ಪರಿವರ್ತನೆ ಆಗ್ತಿಲ್ಲ ಅಂತಾ ಸಚಿವರು ಸುರ್ಜೇವಾಲ ಮುಂದೆ ದೂರು ನೀಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸೋದಿಲ್ಲ. ಯಾರು ಏನೇ ಹೇಳಿದ್ರೂ ನಾವು ಜಾರಿಗೆ ತಂದಿರೋ ಯೋಜನೆಗಳನ್ನ ಮುಂದುವರಿಸುತ್ತೇವೆ ಎಂದಿದ್ದಾರೆ.

ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದ ಸತೀಸ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಬೇಕೆಂದು ನಾನು ಹೇಳಿಲ್ಲ. ಗ್ಯಾರಂಟಿಗಳನ್ನು ಪರಿಷ್ಕರಣೆ ಮಾಡುವುದಕ್ಕೆ ಸಲಹೆ ನೀಡಿದ್ದೇನೆ. ಜನರ ಅಭಿಪ್ರಾಯವನ್ನು ಹೈಕಮಾಂಡ್​ಗೆ ತಿಳಿಸಿದ್ದೇನೆ ಎಂದಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಸಚಿವ ಮುನಿಯಪ್ಪ, ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಯೋಜನೆಗಳು ಸಿಗಬೇಕೆಂಬುದು ಸರ್ಕಾರದ ಉದ್ದೇಶ. ಗೃಹ ಜ್ಯೋತಿ ಬಳಸುವ ಅರ್ಹರಿಗೆ ಮಾತ್ರ ಸೌಲಭ್ಯಗಳನ್ನು ಕಲ್ಪಿಸಲು ನಾವು ಪರಿಷ್ಕರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆ ಆಗಿಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ಬಜೆಟ್​​ನಲ್ಲಿ ಯೋಜನೆಗೆ 56 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ. ಹೀಗಾಗಿ, ಯೋಜನೆಯನ್ನು ಪರಿಷ್ಕರಣೆ ಮಾಡೋದು ಅಸಾಧ್ಯವೆಂದಿದ್ದಾರೆ.

- Advertisement -

Latest Posts

Don't Miss