ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಡಾ. ನೇಮಿನಾಥ ತಪಕೀರೆ ಎಂಬ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಮುಂದಾಗಿ ಡೆತ್ ನೋಟ್ ಬರೆದಿದ್ದಾರೆ. ಆ ಡೆತ್ ನೋಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆತಂಕ ಸೃಷ್ಟಿಸಿದೆ. ಅವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿರುವುದರಿಂದ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಗಮನಾರ್ಹ ಏನೆಂದರೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಹೆಸರು ಬರೆದು ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.
ಪತ್ರದಲ್ಲಿ ಏನಿದೆ? ಅನ್ನೋದನ್ನ ನೋಡೋದಾದ್ರೆ ‘ಕಳೆದ ಎಂಟು ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಅತಿಥಿ ಉಪನ್ಯಾಸಕರ ಕುರಿತಾಗಿ ಸರ್ಕಾರ ತಳೆಯುತ್ತಿರುವ ಧೋರಣೆ ಎಲ್ಲರಲ್ಲಿ ಅಭದ್ರತೆ ಹುಟ್ಟು ಹಾಕುತ್ತಿದೆ. ಸುಂದರವಾದ ಬದುಕನ್ನು ಕಟ್ಟಿಕೊಂಡು ಬಾಳಬೇಕಾದ ಅತಿಥಿ ಉಪನ್ಯಾಸಕರೆಲ್ಲ ಅತಂತ್ರರಾಗಿ ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದು ಇಂದು ನಿನ್ನೆಯದ್ದಲ್ಲ. ಪ್ರತೀ ವರ್ಷ ಮತ್ತೆ ಮತ್ತೆ ಆತಂಕವನ್ನು ಎದುರಿಸುತ್ತ… ಹೇಗೋ? ಏನೋ? ಕೌನ್ಸೆಲಿಂಗ್ ನಲ್ಲಿ ಕೆಲಸ ಸಿಗುತ್ತೋ ಇಲ್ಲವೋ? ಸಿಕ್ಕರೆ ಎಲ್ಲಿ ಸಿಗುತ್ತೆ? ಹೀಗೆ ಹಲವಾರು ಪ್ರಶ್ನೆಗಳೊಂದಿಗೆ ಅಸಹಾಯಕರಾಗಿ ಕಾಯುವಂತಹ ಪರಿಸ್ಥಿತಿ ಇದೆ.
ಒಂದು ದೇಶವನ್ನು ಹಾಳು ಮಾಡಬೇಕಾದರೆ ಆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆ ಸಾಕು ಎಂಬಂತೆ, ಇಂದು ಬಡ ಮಕ್ಕಳು ಓದುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಶೈಕ್ಷಣಿಕ ಮಟ್ಟ ಕುಸಿಯುವುದಕ್ಕೆ ಸರ್ಕಾರವೇ ಹೊಣೆಯಾಗಿದೆ. ಇತ್ತ ಅತಿಥಿ ಉಪನ್ಯಾಸಕರ ಬದುಕು ಹಾಳಾದರೆ, ಅತ್ತ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಸರ್ಕಾರ ಯಾವ ಯಾವುದೋ ಯೋಜನೆಗಳನ್ನು ಜಾರಿಗೆ ತರುವಾಗ ಇಲ್ಲದೇ ಇರುವ ಕಾನೂನು ತೊಡಕುಗಳು ಅತಿಥಿ ಉಪನ್ಯಾಸಕರ ಸೇವಾ ಸಕ್ರಮ ಮಾಡಬೇಕಾದಾಗ ಹೇಗೆ ಬರುತ್ತವೆ ಸ್ವಾಮಿ?
ಎಲ್ಲಾ ನನ್ನ ಅತಿಥಿ ಉಪನ್ಯಾಸಕ ಮಿತ್ತರೇ, ಈ ನನ್ನ ಸಾವಿನೊಂದಿಗೆ ನಿಮ್ಮ ಹೋರಾಟ ತೀವ್ರವಾಗಲಿ. ನಿಮ್ಮ ಹೋರಾಟಕ್ಕೆ ನನ್ನ ಜಯ ಸಿಗಲಿ. ಸರ್ಕಾರ ಇದರ ಮೂಲಕವಾದರೂ ಎಚ್ಚೆತ್ತು ಅತಿಥಿ ಉಪನ್ಯಾಸಕರ ಬದುಕಿಗೆ ಬೆಳಕು ತೋರುವ ಕೆಲಸ ಮಾಡಲಿ. ಇಲ್ಲಿ ಅರ್ಹ, ಅನರ್ಹ ಅನ್ನೋ ಪ್ರಶ್ನೆ ಬೇಡ. ಆ ರೀತಿಯ ತಾರತಮ್ಯ ಬೇಡ. ಎಂದು ಬರೆಯಲಾಗಿದೆ.
ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅತಿಥಿ ಉಪನ್ಯಾಸಕರ ಸಮಸ್ಯೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




