ಬೆಂಗಳೂರು: ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿʼ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರಿಗೆ ಇದರ ಅನುಕೂಲವಾಗುತ್ತಿದೆ ಎಂದು ಹೇಳಲು ಸಂತೋಷವಾಗುತ್ತದೆ. ನಮ್ಮ ಈ ಯೋಜನೆಯ ಕುರಿತು ರಾಷ್ಟ್ರೀಯ-ಅಂತರರಾಷ್ಟ್ರೀಯ ಮಾಧ್ಯಮಗಳು ಅಧ್ಯಯನ ಮಾಡಿ ವ್ಯಾಪಕ ಪ್ರಶಂಸೆ ಮಾಡಿ ಬರೆದಿವೆ. ಶಕ್ತಿ ಯೋಜನೆ ನಮ್ಮ ಆರ್ಥಿಕ ಶಕ್ತಿಗೆ ನವ ಚೈತನ್ಯವನ್ನೇ ಉಂಟು ಮಾಡಿದೆ. ಇದುವರೆಗೆ 38.54 ಕೋಟಿ ಟ್ರಿಪ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಎರಡನೇ ಗ್ಯಾರಂಟಿ ಯೋಜನೆ, 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ. ಈ ಯೋಜನೆ ಜುಲೈ 1 ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1 ರ ಬಿಲ್‍ನಿಂದ ಗ್ರಾಹಕರಿಗೆ ಸೌಲಭ್ಯ ದೊರೆಯುತ್ತಿದೆ. ಸುಮಾರು 2 ಕೋಟಿ ಗ್ರಾಹಕರಿಗೆ ಈ ಯೋಜನೆಯಿಂದ ಅನುಕೂಲವಾಗಲಿದ್ದು, ಇದುವರೆಗೆ 1.49 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದು, ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಬಾಡಿಗೆದಾರರಿಗೂ ಈ ಸೌಲಭ್ಯ ವಿಸ್ತರಿಸಲಾಗಿದೆ. ಇದಕ್ಕಾಗಿ ನಾವು ವಾರ್ಷಿಕವಾಗಿ 13,910 ಕೋಟಿ ರೂ.ಗಳಷ್ಟು ವಿನಿಯೋಗಿಸುತ್ತಿದ್ದೇವೆ.
ಹಸಿವು ಮುಕ್ತ ಕರ್ನಾಟಕದ ಕಲ್ಪನೆಯನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಜಾರಿಗೊಳಿಸಿರುವ ಮತ್ತೊಂದು ಗ್ಯಾರಂಟಿ ಯೋಜನೆ ‘ಅನ್ನ ಭಾಗ್ಯʼ. ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ಅಸಹಕಾರದ ನಡುವೆಯೂ ನಮ್ಮ ಸರ್ಕಾರವು ಪ್ರತಿ ಫಲಾನುಭವಿಗೆ ಕೇಂದ್ರವು ನೀಡುವ 5 ಕೆಜಿ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡಲು ಕ್ರಮ ತೆಗೆದುಕೊಳ್ಳುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಗದು ವರ್ಗಾಯಿಸಲು ನಿರ್ಧರಿಸಿದ್ದು, ಈ ವರೆಗೆ 1.04 ಕೋಟಿ ಕುಟುಂಬಗಳು ನಗದು ಸೌಲಭ್ಯ ಪಡೆಯುತ್ತಿವೆ. ಉಳಿದ ಕುಟುಂಬಗಳಿಗೆ ಸದ್ಯದಲ್ಲಿಯೇ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಿದ್ದೇವೆ.
ಬಡತನ ನಿವಾರಣೆಗೆ ನೇರ ನಗದು ನೀಡುವ ಕಾರ್ಯಕ್ರಮಗಳು ಅತ್ಯುತ್ತಮ ಪರಿಹಾರ ನೀಡಬಲ್ಲವು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ‘ಗೃಹಲಕ್ಷ್ಮಿ’ ಯೋಜನೆಯನ್ನು ಜಾರಿಗೆ ತರುತ್ತಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ದಿನಾಂಕ ಆಗಸ್ಟ್ 27 ರಂದು ಮಹಿಳೆಯರ ಖಾತೆಗೆ ಮಾಸಿಕ 2000 ರೂ.ಗಳನ್ನು ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೆ 1.08 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ. ಪದವಿ, ಡಿಪ್ಲೊಮಾ ಪಡೆದ ಯುವಕರಿಗೆ ಕೂಡಲೇ ಉದ್ಯೋಗ ದೊರೆಯದಿದ್ದರೆ, ನಿರಾಶರಾಗದಂತೆ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ, ಬೆಂಬಲ ನೀಡುವ ಯೋಜನೆ ಯುವನಿಧಿ. ಶಿಕ್ಷಣ ಪಡೆದು ಆರು ತಿಂಗಳಾದರೂ ಉದ್ಯೋಗ ದೊರೆಯದ ಯುವಜನರಿಗೆ ಉದ್ಯೋಗ ದೊರೆಯುವವರೆಗೆ ಅಥವಾ ಗರಿಷ್ಠ ಎರಡು ವರ್ಷದವರೆಗೆ, ಪದವೀಧರರಿಗೆ 3000 ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. 2022-23ರ ಶೈಕ್ಷಣಿಕ ವರ್ಷ ಅಂತ್ಯಗೊಂಡ 6 ತಿಂಗಳ ನಂತರ ಈ ಯೋಜನೆ ಜಾರಿಯಾಗಲಿದೆ.
ನಮ್ಮ ಸರ್ಕಾರದ ಈ ಗ್ಯಾರಂಟಿ ಯೋಜನೆಗಳಿಂದ ಬಡ, ಮಧ್ಯಮ ವರ್ಗದ ಕುಟುಂಬಗಳ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಬರಲಿದೆ. ಜಾತಿ, ಮತ, ವರ್ಗ, ವರ್ಣ ಭೇದವಿಲ್ಲದೆ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.
Independence Day: ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
Siddaramaiah: ಬ್ರಿಟಿಷರು ಕೈಗಳಿಗೆ ನಿರುದ್ಯೋಗವನ್ನು, ಹೊಟ್ಟೆಗೆ ಹಸಿವನ್ನು ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ..!