ದಿನಗಳೆದಂತೆ ಒಂಟಿ ಹೆಣ್ಣಿನ ಮೇಲೆ ದೌರ್ಜನ್ಯದ ಯತ್ನ ಹೆಚ್ಚುತ್ತಲೇ ಇದೆ. ತಮಗೆ ಯಾರೂ ಹೇಳೋರೂ ಕೇಳೋರೂ ಇಲ್ಲವೆಂದು ತಿಳಿದಿರುವ ಕಾಮುಕರು, ಬೆಳಕಿರುವಾಗಲೇ ತಮ್ಮ ಚಾಳಿ ತೋರಿಸೋಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಒಬ್ಬೊಬ್ಬರೆ ಆಟೋ, ಕಾರ್‌ನಲ್ಲಿ ತಿರುಗಾಡುವ ಮಹಿಳೆಯರು ಆದಷ್ಟು ಹುಷಾರಾಗಿರಬೇಕು ಅನ್ನೋದೇ ಇಂದಿನ ಸುದ್ದಿಯ ವಿಷಯ.
ಮಧ್ಯಾಹ್ನದ ವೇಳೆ ಹರಿಯಾಣದ ಗುರುಗಾವ್‌ನಲ್ಲಿ ಯುವತಿಯೊಬ್ಬಳು ತನ್ನ ಮನೆಗೆ ಹೋಗಲು ಆಟೋ ಹತ್ತಿದ್ದಾಳೆ. ಇನ್ನೇನು ಮನೆಗೆ ತಲುಪಲು 7 ನಿಮಿಷವಷ್ಟೇ ಇದೆ ಎನ್ನುವಷ್ಟೊತ್ತಿಗೆ, ಆಟೋ ಚಾಲಕ ಬಲಕ್ಕೆ ತಿರುವುದನ್ನ ಬಿಟ್ಟು, ಎಡಕ್ಕೆ ತಿರುಗಿದ್ದಾನೆ. ಅದಕ್ಕೆ ಆ ಯುವತಿ ಅಣ್ಣಾ, ನಮ್ಮ ಮನೆಗೆ ಹೋಗಲು ಬಲಕ್ಕೆ ತಿರುಗಬೇಕು, ನೀವು ಎಡಕ್ಕೆ ಯಾಕೆ ಹೋಗುತ್ತಿದ್ದೀರಿ ಎಂದು ಕೇಳಿದ್ದಾಳೆ. ಆದ್ರೆ ಇದಕ್ಕೆ ಕಿವಿಗೊಡದ ಆಟೋ ಡ್ರೈವರ್ ಜೋರಾಗಿ ದೇವರ ಹಾಡು ಹಾಕಿ, ಅದರೊಟ್ಟಿಗೆ ತಾನು ಹಾಡಲು ಶುರು ಮಾಡಿದ್ದಾನೆ.
ಯುವತಿ 8ರಿಂದ 10 ಸಲ ಅವನ ಬೆನ್ನಿಗೆ ತಿವಿದಿದ್ದಾಳಂತೆ. ಆದ್ರೂ ಕೂಡ ಆತ ಅದಕ್ಕೆ ಕಿವಿಗೊಡಲಿಲ್ಲ. ಆಗ ಆಕೆಗೆ ಈತ ತನ್ನನ್ನು ಕಿಡ್ನ್ಯಾಪ್ ಮಾಡುತ್ತಿದ್ದಾನೆಂದು ತಿಳಿದು ಬಂದಿದೆ. ಅಲ್ಲದೇ, ಕ್ಷಣ ಕ್ಷಣಕ್ಕೂ ವಾಹನದ ಸ್ಪೀಡ್ ಹೆಚ್ಚು ಮಾಡಿದ್ದಾನಂತೆ. ಇನ್ನು ಸುಮ್ಮನಿದ್ದರೆ, ಇವನು ಸ್ಪೀಡಾಗಿ ಗಾಡಿ ಓಡಿಸುತ್ತಾನೆಂದು ತಿಳಿದ ಯುವತಿ, ಆಟೋದಿಂದ ಹೊರಗೆ ಜಿಗಿದು, ಮನೆಗೆ ಓಡಿದ್ದಾಳೆ.
ಇನ್ನು ಈ ರೀತಿಯ ಕೆಟ್ಟ ಅನುಭವವನ್ನು ಅನುಭವಿಸಿರುವ ಯುವತಿಯ ಹೆಸರು ನಿಷ್ಠಾ. ಈಕೆ ತನ್ನ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾಳೆ. ನನ್ನ ಜೀವಮಾನದಲ್ಲೇ ಈ ದಿನ ಅತೀ ಕೆಟ್ಟದ್ದಾಗಿದ್ದು, ನನಗಾದ ಕೆಟ್ಟ ಅನುಭವವನ್ನು ನೆನೆಸಿಕೊಂಡರೆ, ನನ್ನ ಮೈ ಜುಮ್ಮೆನ್ನುತ್ತದೆ. ಅದ್ಯಾವ ಧೈರ್ಯದ ಮೇಲೆ ನಾನು ಆಟೋದಿಂದ ಜಿಗಿದೆನೋ ನನಗೆ ಗೊತ್ತಿಲ್ಲ. ಮಾನ ಕಳೆದುಕೊಳ್ಳುವುದಕ್ಕಿಂತ, ಕೈ ಕಾಲು ಮುರಿದುಕೊಳ್ಳೋದೇ ಲೇಸು ಅನ್ನಿಸಿತು, ಅದಕ್ಕೆ ಹಿಂದೆ ಮುಂದೆ ಯೋಚಿಸದೇ ಹೀಗೆ ಮಾಡಿಬಿಟ್ಟೆ. ಪುಣ್ಯಕ್ಕೆ ಜೀವ ಉಳಿಸಿಕೊಂಡು ಬಂದಿದ್ದೇನೆಂದು ಬರೆದಿದ್ದಾಳೆ.
ಗುರ್‌ಗಾವ್‌ನ ಪಾಲಮ್ ವಿಹಾರದ ಪೊಲೀಸ್ ಅಧಿಕಾರಿಯಾದ ಜಿತೇಂದರ್ ಯಾದವ್, ನಾವು ಆರೋಪಿಯನ್ನು ಆದಷ್ಟು ಬೇಗ ಅರೆಸ್ಟ್ ಮಾಡುತ್ತೇವೆ. ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್‌ನ್ನ ಕೂಡ ನೋಡಿದ್ದೇವೆ. ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ.