ಗುರುಕಿರಣ್ ರವರು ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರು. ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ ಹಲವು ಸಿನಿಮಾಗಳ ಸಂಗೀತ, ಅತ್ಯಂತ ಜನಪ್ರಿಯತೆ ಗಳಿಸಿವೆ. ಹಲವಾರು ಸಿನಿಮಾಗಳಲ್ಲಿ ಹಾಡಿರುವ ಇವರು ಹಿನ್ನೆಲೆ ಗಾಯಕರೂ ಕೂಡ ಹೌದು. ಅದಷ್ಟೇ ಅಲ್ಲದೆ ಉಪೇಂದ್ರ, ಕುಟುಂಬ, ನಿಷ್ಕರ್ಷ ಇನ್ನು ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೂ ಓಂಕಾರ, ಆಟೋಶಂಕರ್ ಇತ್ಯಾದಿ ಚಿತ್ರಗಳಲ್ಲಿ ಕೆಲವು ಗೀತೆಗಳನ್ನು ರಚಿಸಿದ್ದಾರೆ.
ಗುರುಕಿರಣ್ ಮತ್ತು ಪಲ್ಲವಿ ರವರು ಅವರ 25 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸೆಲೆಬ್ರಿಟಿಗಳು, ಆತ್ಮೀಯರು ಹಾಗೂ ಸಂಬಂಧಿಕರ ಜೊತೆ ಆಚರಿಸಿಕೊಂಡಿದ್ದು, ಪಾರ್ಟಿಯಲ್ಲಿ ಸೃಜನ್ ಲೋಕೇಶ್, ಪ್ರಿಯಾಂಕಾ ಉಪೇಂದ್ರ, ಸುಜಾತಾ ಅಕ್ಷಯ್, ಹರ್ಷಿಕಾ ಪೂಣಚ್ಛ ಸೇರಿ ಇನ್ನೂ ಅನೇಕ ಕಲಾವಿದರು ಹಾಜರಾಗಿದ್ದರು.
ಗುರುಕಿರಣ್ ಅವರು ಪತ್ನಿ ಪಲ್ಲವಿ ಅವರಿಗೆ “ನಾವಿಬ್ಬರು ಕೈ ಬೆಸೆದು ಇಂದಿಗೆ 25 ವರುಷ. ಆದರೆ ಅದಿನ್ನು ನಿನ್ನೆ ಮೊನ್ನೆ ನಡೆದಂತಿದೆ. ಒಂದು ಕ್ಷಣವು ಏಕಾಂಗಿ ಅನಿಸಲು ಬಿಡದಂತೆ ನೀನು ನನ್ನ ನೋವು, ನಲಿವುಗಳನ್ನೆಲ್ಲ ಹಂಚಿಕೊಂಡಿರುವೆ. ನಿನ್ನೊಂದಿಗೆ ಬದುಕಿದ್ದೇ ಒಂದು ಸಂತೋಷದ ಪಯಣ. ಇನ್ನು ಬಹುದೂರ ಸಾಗಬೇಕಿದೆ, ಬಾ ಜೊತೆ ನಡೆಯೋಣ” ಎಂದು ಸೋಶಿಯಲ್ ಮೀಡಿಯಾದಲ್ಲಿ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸಿದ್ದಾರೆ.
ಇನ್ನು ಇವರಿಬ್ಬರು ಪ್ರೀತಿಸಿ ಮದುವೆಯಾದವರು. ಪಲ್ಲವಿ ಅವರ ಡಿಗ್ರಿ ಫೈನಲ್ ಇಯರ್ ಪರೀಕ್ಷೆ ಮುಗಿದಕೂಡಲೇ ಇವರಿಬ್ಬರ ಮದುವೆ ಮಾಡಿಕೊಂಡರು. ಇವರಿಬ್ಬರ ಮದುವೆ ನಡೆದಾಗ ಪಲ್ಲವಿ ಅವರಿಗೆ 20 ವರ್ಷ ಆಗಿತ್ತು. ಇದೀಗ ಈ ದಂಪತಿಗಳಿಗೆ ಓರ್ವ ಮಗ ಹಾಗೂ ಓರ್ವ ಮಗಳು ಇದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ