ತನ್ನ ಪಾಡಿಗೆ ತಾನು ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಜಿಮ್ ಟ್ರೈನರ್ ಒಬ್ಬ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಡೆದಿದೆ. ಆಟವಾಡುತ್ತಿದ್ದ ಬಾಲಕನನ್ನು ಪಕ್ಕದ ಮನೆಯಿಂದ ಹೊರಗೆ ಬಂದ ವ್ಯಕ್ತಿ ಕಾಲಿನಿಂದ ಒದ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅಜ್ಜಿ ಮನೆಗೆ ಬಂದಿದ್ದ ನೀವ್ ಜೈನ್ ಎಂಬ ಬಾಲಕ, ರಸ್ತೆಯಲ್ಲೇ ನಿರಾಳವಾಗಿ ಆಟವಾಡುತ್ತಿದ್ದ. ಈ ವೇಳೆ ಸಮೀಪದ ಮನೆಯಿಂದ ಹೊರಗೆ ಬಂದ ಜಿಮ್ ಟ್ರೈನರ್, ಯಾವುದೇ ಕಾರಣವಿಲ್ಲದೆ ಬಾಲಕನನ್ನು ಫುಟ್‌ಬಾಲ್‌ನಂತೆ ಕಾಲಿನಿಂದ ಒದ್ದಿದ್ದಾನೆ. ಒದ್ದ ರಭಸಕ್ಕೆ ಬಾಲಕ ಕೆಳಗೆ ಬಿದ್ದಿದ್ದು, ಮುಖ ಹಾಗೂ ಮೈ-ಕೈಗೆ ಗಾಯಗಳಾಗಿವೆ.
ಘಟನೆಯನ್ನ ಗಮನಿಸಿದ ವಾಹನ ಸವಾರನೊಬ್ಬ ತಕ್ಷಣವೇ ಬಾಲಕನ ತಾಯಿಗೆ ಮಾಹಿತಿ ನೀಡಿದ್ದಾನೆ. ನಂತರ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೋಷಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಯನ್ನ ಜಿಮ್ ಟ್ರೈನರ್ ರಂಜನ್ ಎಂದು ಗುರುತಿಸಲಾಗಿದೆ. ಇದೇ ತಿಂಗಳ 14ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕನಿಗೆ ಗಾಯಗಳಾಗಿರುವುದನ್ನು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಡಿಸಲಾಗಿದೆ.
ಸಿಸಿಟಿವಿಯಲ್ಲಿ ಆರೋಪಿಯ ಕೃತ್ಯ ಸ್ಪಷ್ಟವಾಗಿ ದಾಖಲಾಗಿದ್ದು, ಇದನ್ನು ಕಂಡ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನ ತಾಯಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದು, ಬನಶಂಕರಿ ಪೊಲೀಸ್ ಠಾಣೆಯ ಪೊಲೀಸರು ರಂಜನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಆರೋಪಿ ರಂಜನ್ ಮಾನಸಿಕ ಅಸ್ವಸ್ಥನಾಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಪೊಲೀಸರು, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ವರದಿ : ಲಾವಣ್ಯ ಅನಿಗೋಳ




