ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದಾರೆ. ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಲಾಗಿದೆ. ಆದರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೋಗುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಜಾಮೀನು ಕೋರಿ ಪ್ರಜ್ವಲ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಜ್ವಲ್ ಬೇಲ್ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರ್ಕಾರಿ ವಕೀಲರಿಗೆ ಕೆಲವೊಂದು ಸರ್ಟಿಫೈ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಲಯ ಆಕ್ಷೇಪಣೆ ಎತ್ತಿದೆ. ಮುಂದಿನ ವಿಚಾರಣೆ ವೇಳೆ ದಾಖಲೆಗಳನ್ನು ಸಲ್ಲಿಸುವುದಾಗಿ ಪ್ರಜ್ವಲ್ ಪರ ವಕೀಲರು ಮಾಹಿತಿ ನೀಡಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಜುಲೈ 18ಕ್ಕೆ ಮುಂದೂಡಿಕೆಯಾಗಿದೆ.
ಇತ್ತ ತಂದೆ ಹೆಚ್.ಡಿ. ರೇವಣ್ಣ ತಮ್ಮ ಪುತ್ರನಿಗಾಗಿ ಶಪಥವೊಂದನ್ನ ಮಾಡಿದ್ದಾರೆ. ತಮ್ಮಿಷ್ಟದ ಖಾದ್ಯವನ್ನ ಬಿಟ್ಟು ಮಗನ ಬರುವಿಕೆಗೆ ಕಾಯುತ್ತಿದ್ದಾರೆ. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಪಾರ ದೈವಭಕ್ತ, ಏನೇ ಕೆಲಸ ಮಾಡಬೇಕಾದರೂ ನೋಡಿ ಮಾಡಿ ಹೆಜ್ಜೆ ಇಡುವಂತಹ ವ್ಯಕ್ತಿ. ಆದ್ರೆ, ಪುತ್ರರಿಗೆ ಬಂದಿರೋ ಸಂಕಷ್ಟ ರೇವಣ್ಣನನ್ನ ಕುಗ್ಗಿಸಿಬಿಟ್ಟಿದೆ. ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಪರಪ್ಪನ ಅಗ್ರಹಾರ ವಾಸಿಯಾಗಿರೋ ಪುತ್ರ ಪ್ರಜ್ವಲ್ ರೇವಣ್ಣನಿಗಾಗಿ ಮಾಜಿ ಸಚಿವರು ಹರಕೆ ಹೊತ್ತು, ಬಿಡುಗಡೆಗಾಗಿ ದೇವರ ಬಳಿ ವಿಶಿಷ್ಟ ಸಂಕಲ್ಪ ಮಾಡಿದ್ದಾರೆ.
ಪುತ್ರನಿಗೆ ಒಂದು ಕೇಸ್‌ನಲ್ಲಿ ಜಾಮೀನು ಸಿಕ್ರೆ ಮತ್ತೊಂದು ಕೇಸ್‌ನಲ್ಲಿ ಸಂಕಷ್ಟ ತಲೆದೋರುತ್ತಲೇ ಇದೆ. ಹೀಗಾಗಿ ಹೆಚ್.ಡಿ. ರೇವಣ್ಣ ದೇವರ ಹರಕೆ ಹೊರುವ ಮೂಲಕ ತಮ್ಮ ಇಷ್ಟದ ಖಾದ್ಯವನ್ನ ಪುತ್ರನಿಗಾಗಿ ತ್ಯಾಗ ಮಾಡಿದ್ದಾರೆ. ಪ್ರಜ್ವಲ್ ಬಿಡುಗಡೆ ಆಗುವವರೆಗೆ ನಾನ್ ವೆಜ್ ತಿನ್ನೋದಿಲ್ಲ ಅಂತ ಹರಕೆ ಹೊತ್ತಿದ್ದಾರೆ. ಇಷ್ಟೇ ಅಲ್ಲದೆ ಕಳೆದ ಎರಡು ವರ್ಷಗಳಿಂದ ಮಾಂಸಹಾರ ತ್ಯಜಿಸಿದಿದ್ದಾರೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ