ರಾಜ್ಯ ಕಾಂಗ್ರೆಸ್‌ನಲ್ಲಿ ಇದೀಗ ಸಚಿವ ಸಂಪುಟ ಪುನಾರಚನೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನಕ್ಕೂ ಮೊದಲು ಸಂಪುಟ ಪುನಾರಚನೆ ಅಗತ್ಯ ಎಂದು ಪಟ್ಟು ಹಿಡಿದಿರುವ ವೇಳೆ, ಇತ್ತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹಂತದಲ್ಲಿ ಯಾವುದೇ ಬದಲಾವಣೆ ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಉಭಯ ನಾಯಕರ ನಿಲುವಿನ ಹಿಂದೆ ತಮ್ಮದೇ ಆದ ರಾಜಕೀಯ ಲೆಕ್ಕಾಚಾರಗಳು ಅಡಗಿರುವುದಾಗಿ ಮೂಲಗಳು ತಿಳಿಸಿವೆ. ಸರ್ಕಾರಕ್ಕೆ ನವೆಂಬರ್ 20ರಂದು ಎರಡುವರೆ ವರ್ಷಗಳು ಪೂರ್ಣಗೊಳ್ಳಲಿವೆ. ಇದೇ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಕುರಿತ ಚರ್ಚೆ ಮರುಚೇತನಗೊಂಡಿದೆ. ಹಲವು ಆಕಾಂಕ್ಷಿ ಶಾಸಕರು ಈಗಾಗಲೇ ಮಂತ್ರಿಗಿರಿಗಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರನ್ನು ಸಂಪರ್ಕಿಸಿ ಲಾಬಿ ಆರಂಭಿಸಿದ್ದಾರೆ.
ಡಿಸೆಂಬರ್ ಎರಡನೇ ವಾರಕ್ಕೂ ಮುನ್ನ ಸಂಪುಟ ಪುನಾರಚನೆ ನಡೆಯಬೇಕೆಂದು ಸಿಎಂ ಸಿದ್ದರಾಮಯ್ಯ ಒತ್ತಡ ಹೇರಿದ್ದಾರೆ. ಇದರ ಹಿಂದೆ ತಮ್ಮ ನಾಯಕತ್ವವನ್ನು ಬಲಪಡಿಸುವ ರಾಜಕೀಯ ಉದ್ದೇಶ ಅಡಗಿದೆ ಎಂದು ಪಕ್ಷದ ಒಳಮೂಲಗಳು ಹೇಳುತ್ತಿವೆ. ಹೈಕಮಾಂಡ್ ಗಮನ ಸೆಳೆಯುವ ಉದ್ದೇಶದಿಂದಲೇ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಘಟನೆ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಗಮನಕ್ಕೂ ಈ ವಿಚಾರವನ್ನು ತಂದಿದ್ದಾರೆ.
ಸಿಎಂ ಸಂಪುಟ ಪುನಾರಚನೆಗೆ ಒತ್ತಡ ಹಾಕುತ್ತಿರುವ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಈ ಹಂತದಲ್ಲಿ ಬದಲಾವಣೆ ಅಗತ್ಯವಿಲ್ಲ ಎಂದು ವಾದಿಸುತ್ತಿದ್ದಾರೆ. ಅವರ ಅಭಿಪ್ರಾಯದಲ್ಲಿ, ಸಂಪುಟ ಪುನಾರಚನೆ ನಡೆಯುವುದರಿಂದ ನಾಯಕತ್ವ ಬದಲಾವಣೆಯ ಚರ್ಚೆ ಹಿನ್ನಲೆಯಲ್ಲಿ ಹೋಗುವ ಸಾಧ್ಯತೆ ಇದೆ. ಹಾಗಾಗಿ ಮೊದಲು ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಅವರು ಮನವಿ ಮಾಡುತ್ತಿದ್ದಾರೆ.
ಹಾಗಾದ್ರೆ ಹೈಕಮಾಂಡ್‌ನ ಮುಂದಿನ ಕ್ರಮ ಏನು? ಅನ್ನೋದನ್ನ ನೋಡೋದಾದ್ರೆ ಸದ್ಯ ಹೈಕಮಾಂಡ್ ಈ ಕುರಿತು ಯಾವುದೇ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ಬಳಿಕವೇ ಸಂಪುಟ ಪುನಾರಚನೆ ಕುರಿತ ಸ್ಪಷ್ಟ ಚಿತ್ರಣ ಹೊರಬರುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್‌ನ ಒಳಜಗಳದ ಈ ಹೊಸ ಅಧ್ಯಾಯದಲ್ಲಿ, ಹೈಕಮಾಂಡ್ ಯಾವ ನಾಯಕರ ಮನವಿಗೆ ತಲೆಬಾಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ವರದಿ : ಲಾವಣ್ಯ ಅನಿಗೋಳ

