ಧರ್ಮಸ್ಥಳ ಸೌಜನ್ಯ ಕೇಸ್ ಮರು ತನಿಖೆ ನಡೆದಿದ್ಯಾ? ಪರಂ ಸ್ಪಷ್ಟನೆ!!

ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಯಾರು ಬೇಕಾದರೂ ಹೋಗಬಹುದು. ಆದರೆ, ಇತ್ತೀಚಿನ ಧರ್ಮಸ್ಥಳ ಸಂಬಂಧಿತ ಪ್ರಕರಣಗಳ ಬಳಿಕ ಕಾಂಗ್ರೆಸ್ ಶಾಸಕರೊಬ್ಬರೊಬ್ಬರಾಗಿ ಅಲ್ಲಿಗೆ ಹೋಗುತ್ತಿದ್ದಾರೆ. ನಿಜಕ್ಕೂ ಇದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಟಾಂಗ್ ನೀಡಿದ್ದಾರೆ.

ಮಂಜುನಾಥ ಸ್ವಾಮಿ ಯಾರೋಬ್ಬರಿಗೆ ಮಾತ್ರವಲ್ಲ, ಎಲ್ಲರಿಗೂ ಸೇರಿರುವ ದೇವರು. ದರ್ಶನಕ್ಕೆ ಎಲ್ಲರೂ ಹೋಗಬಹುದು. ಆದರೆ, ಈಗ ಪ್ರಕರಣಗಳ ನಂತರ ಶಾಸಕರು ಅಲ್ಲಿಗೆ ಹೋಗುತ್ತಿರುವುದು ಪ್ರಶ್ನೆಗೆ ಕಾರಣ. ಅವರು ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಂತ ಹೋಗ್ತಿದಾರೋ ಅಥವಾ ತಮ್ಮ ಕಳಂಕ ಕಳೆದುಕೊಳ್ಳಲು ಹೋಗ್ತಿದ್ದಾರೋ ಗೊತ್ತಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ಇಡೀ ವಿಚಾರ ರಾಜಕೀಯ ರೂಪ ಪಡೆದುಕೊಳ್ಳುತ್ತಿದೆಯೆಂದು ಅವರು ಸೂಚಿಸಿದರು. ಇದಕ್ಕೂ ಮುಂಚೆ ಯಾಕೆ ಶಾಸಕರು ಹೋಗಲಿಲ್ಲ? ಈಗಾದ್ರೂ ಏನಪ್ಪಾ ಅಲ್ಲಿ ತನಿಖೆ ನಡೆಯುತ್ತಿದ್ದೆ ಅಂತ ಅಲ್ಲಿಗೆ ಹೋಗ್ತಿದ್ದಾರೆ ಅಂತ ಜನರಿಗೆ ಅನುಮಾನ ಬರುವುದು ಸಹಜ ಎಂದು ಅವರು ಹೇಳಿದರು.

SIT ಈಗಾಗಲೇ ಸೌಜನ್ಯ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದೆ ಎಂಬ ವಿಷಯಕ್ಕೆ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಟರ್ಮ್ಸ್ ಆಫ್ ರೆಫರೆನ್ಸ್‌ನಲ್ಲಿ ಸೌಜನ್ಯ ಪ್ರಕರಣವೇನೂ ನೇರವಾಗಿ ಇಲ್ಲ. ಆದರೆ, ಸಂಬಂಧಿತ ಲಿಂಕ್‌ಗಳು ಹೊರಬಿದ್ದರೆ ಪರಿಶೀಲನೆ ಮಾಡಲೇಬೇಕು. ತನಿಖೆಯಲ್ಲಿ ಲಿಂಕ್‌ಗಳು ಅನಿವಾರ್ಯ. ಆದರೆ ಇದನ್ನು ಮರು ತನಿಖೆ ಅಂತ ನಾನು ಹೇಳಲ್ಲ ಎಂದು ವಿವರಿಸಿದರು.

ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು NIA ತನಿಖೆ ಬೇಕೆಂದು ಮನವಿ ಮಾಡಿರಬಹುದು. ಆದರೆ ವಿದೇಶಿ ಹಣದ ವಿಚಾರವಿದ್ದರೆ ಅದು ಕೇಂದ್ರ ಸರ್ಕಾರದ ವಿಚಾರವಾಗಿದೆ. ರಾಜ್ಯ ಸರ್ಕಾರಕ್ಕೆ ಮಿತಿಯುಳ್ಳ ನಿಯಮಗಳು ಇವೆ. NIA ತನಿಖೆ ಆರಂಭವಾಗಬೇಕೆಂದರೆ ಸ್ಪಷ್ಟವಾದ ನ್ಯಾಯ ಇರಬೇಕು. ಇಲ್ಲದಿದ್ದರೆ, ಕಾನೂನು ಪ್ರಕಾರ ರಾಜ್ಯ ಸರ್ಕಾರ ಏನು ಮಾಡಬಲ್ಲದು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ವರದಿ : ಲಾವಣ್ಯ ಅನಿಗೋಳ

About The Author