ಹೂತಿಟ್ಟ ಶವಗಳ ರಹಸ್ಯ ಕೊನೆಗೂ ಪತ್ತೆಯಾಯ್ತಾ?

ಧರ್ಮಸ್ಥದಲ್ಲಿ ನಿಗೂಢ ಸಾವುಗಳ ಬೆನ್ನತ್ತಿದ್ದ ಎಸ್‌ಐಟಿ ಟೀಂ, ಅನಾಮಿಕನೊಂದಿಗೆ ಸ್ಥಳ ಮಹಜರು ಮಾಡಿತ್ತು. ದೂರುದಾರ ತೋರಿಸಿದ್ದ ಜಾಗದಲ್ಲಿ ಮಾರ್ಕ್‌ ಮಾಡಿದ್ದ ಅಧಿಕಾರಿಗಳು, ಸದ್ಯ ಉತ್ಖನನ ಕಾರ್ಯಕ್ಕೆ ಮುಂದಾಗಿದ್ದಾರೆ.

ತಹಶೀಲ್ದಾರ್‌ ಮತ್ತು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್‌ ನೇತೃತ್ವದಲ್ಲಿ, ಕಾರ್ಯಾಚರಣೆ ಮಾಡಲಾಗ್ತಿದೆ. ಗ್ರಾಮ ಪಂಚಾಯಿತಿಯ 12 ಕಾರ್ಮಿಕರನ್ನು ಕರೆತಂದಿದ್ದು, 4 ತಂಡಗಳಾಗಿ ಮಾಡಲಾಗಿದೆ. ಹಾರೆ, ಗುದ್ದಲಿ, ಪಿಕಾಸಿಗಳೊಂದಿಗೆ ಬಂದಿದ್ದ ಕಾರ್ಮಿಕರು, ಏಕಕಾಲದಲ್ಲಿ 3 ಕಡೆ ಅಗೆಯುತ್ತಿದ್ದಾರೆ.

ಬೆಳಗ್ಗೆಯಿಂದಲೂ ಜಿಟಿಜಿಟಿ ಮಳೆಯಾಗ್ತಿದ್ದು, ಮಳೆಯ ನಡುವೆಯೇ ಉತ್ಖನನ ಪ್ರಕ್ರಿಯೆ ಆರಂಭಿಸಲಾಗಿದೆ. ಮೊದಲು ನೇತ್ರಾವತಿ ಸ್ನಾನ ಘಟ್ಟದ ಬಳಿ, ಮಾರ್ಕ್‌ ಮಾಡಿದ್ದ ಜಾಗಗಳಲ್ಲಿ ಗುಂಡಿ ಅಗೆಯಲಾಗ್ತಿದೆ. ಸ್ಥಳದಲ್ಲಿ ಎಸ್‌ಐಟಿ, ಸೀನ್‌ ಆಫ್‌ ಕ್ರೈಂ ಆಫೀಸರ್ಸ್‌, ಎಫ್‌ಎಸ್‌ಎಲ್‌, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ತಂಡವೇ ಮೊಕ್ಕಾಂ ಹೂಡಿದೆ. ಎಲ್ಲವನ್ನೂ ವೀಡಿಯೋ ರೆಕಾರ್ಡ್‌ ಮಾಡಿಕೊಳ್ಳಲಾಗ್ತಿದೆ.

ಮಾರ್ಕ್‌ ಮಾಡಿರುವ ಜಾಗಗಳಲ್ಲಿ, 6 ಅಡಿ ಅಗಲ, 6 ಅಡಿ ಉದ್ದದಷ್ಟು ಅಗೆಯಲು ನಿರ್ಧರಿಸಲಾಗಿದೆ. ಶವ ಹೂತು ಹಲವು ವರ್ಷಗಳೇ ಆಗಿದೆ. ನೀರು ಹರಿಯುವ ಜಾಗ ಆಗಿರೋದ್ರಿಂದ, ಕೊಚ್ಚಿಕೊಂಡು ಬಂದ ಮಣ್ಣು ನಿಂತಿರುವ ಸಾಧ್ಯತೆ ಇರುತ್ತದೆ. ನಿರ್ದಿಷ್ಟ ಜಾಗದಲ್ಲೇ ಶವದ ಅವೇಶೇಷ ಸಿಗುತ್ತೆ ಅಂತಾ ಹೇಳಲು ಆಗಲ್ಲ. ಹೀಗಾಗಿ ನಿರ್ದಿಷ್ಟ ಜಾಗದ ಅಕ್ಕಪಕ್ಕದಲ್ಲೂ, ಅಗೆಯಬೇಕಾದ ಅಗತ್ಯವಿರುತ್ತದೆ. ಇಂದು 3ರಿಂದ 4 ಮಾರ್ಕ್‌ ಜಾಗಗಳಲ್ಲಿ ಅಗೆಯುವ ಸಾಧ್ಯತೆ ಇದೆ.

ಇನ್ನು, ಮಾರ್ಕ್‌ ಮಾಡಿರುವ ಕೆಲವು ಭಾಗಗಳಲ್ಲಿ ಗಟ್ಟಿ ಮಣ್ಣಿದೆ. ಕಾರ್ಮಿಕರಿಗೆ ಅಗೆಯಲು ಸಾಧ್ಯವಾಗದಿದ್ರೆ, ಜೆಸಿಬಿ ಬಳಸಿ ಅಗೆಯುವ ಕಾರ್ಯ ಮಾಡಲಾಗುತ್ತದೆ.

ಒಟ್ನಲ್ಲಿ ನೇತ್ರಾವತಿ ಕಾಡಿನ ಮಧ್ಯೆ ಉತ್ಖನನ ಕಾರ್ಯ ಶುರುವಾಗಿದ್ದು, 50ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

About The Author