ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವ ಅಂತಿಮ ಘಟ್ಟ ತಲುಪಿದ್ದು, ಅಮ್ಮನ ದರ್ಶನಕ್ಕೆ ಇಂದು ಅಂದ್ರೆ ಅಕ್ಟೋಬರ್ 22 ಕೊನೆ ದಿನವಾಗಿದೆ. ಇಷ್ಟು ದಿನದ ಉತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದಾರೆ. ಅಕ್ಟೋಬರ್ 10ರಿಂದ ಆರಂಭವಾದ ದರ್ಶನದ ಅವಧಿಯಲ್ಲಿ 24 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟು ಭಕ್ತರು ಆಗಮಿಸಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.
ದೇವಾಲಯದ ಟಿಕೆಟ್ ಹಾಗೂ ಪ್ರಸಾದ ಮಾರಾಟದಿಂದ ಒಟ್ಟು ₹25 ಕೋಟಿ ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷದ ₹12.5 ಕೋಟಿಗಿಂತ ದ್ವಿಗುಣವಾಗಿದೆ. ಈವರೆಗೂ ₹1000 ಮತ್ತು ₹300 ಟಿಕೆಟ್‌ಗಳಿಂದ 3.4 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಭಕ್ತರ ಜೊತೆಗೆ ಅನೇಕ ರಾಜಕೀಯ ನಾಯಕರು, ಮಠಾಧೀಶರು ಹಾಗೂ ಚಿತ್ರರಂಗದ ಗಣ್ಯರೂ ದೇವಿಯ ದರ್ಶನ ಪಡೆದಿದ್ದಾರೆ.
ಹೀಗಾಗಿ ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದುಬಂದಿತ್ತು. ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎನ್ನುವ ದಾಖಲೆ ಸೃಷ್ಟಿಯಾಗಿದೆ. ಇಂದು ಕೊನೆ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೂ ಭಕ್ತರ ದಂಡೇ ಪ್ರವಾಹ ರೂಪದಲ್ಲಿ ಹರಿದುಬಂದಿತ್ತು. ಸದ್ಯ ಹಾಸನಾಂಬೆಯ ದೇವಾಲಯ ಕ್ಲೋಸ್ ಆಗಿದೆ. ಇನ್ನು ದೇವಿಯ ದರ್ಶನಕ್ಕಾಗಿ ಒಂದು ವರ್ಷ ಕಾಯಬೇಕು ಅಷ್ಟೇ.
ವರದಿ : ಲಾವಣ್ಯ ಅನಿಗೋಳ