Tuesday, October 14, 2025

Latest Posts

ಎರಡೇ ದಿನದಲ್ಲಿ ಹಾಸನಾಂಬೆ ದೇಗುಲದಲ್ಲಿ ಕೋಟಿ – ಕೋಟಿ ಆದಾಯ ದಾಖಲೆ!

- Advertisement -

ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿಯೇ ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದುಬಂದಿತು. ಸಾರ್ವಜನಿಕ ದರ್ಶನ ಆರಂಭಗೊಂಡು ಕೇವಲ ಮೂರು ದಿನಗಳಲ್ಲೇ ಸುಮಾರು ಮೂರೂವರೆ ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಬೆಳಿಗ್ಗೆ 8 ಗಂಟೆಯ ವೇಳೆಗೆ ಸಾಲು ಸರಾಗವಾಗಿ ಸಾಗಿದ್ದು, ಮಧ್ಯಾಹ್ನ ವೇಳೆಗೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

ಕಂದಾಯ ಇಲಾಖೆಯ ಅಧಿಕಾರಿ ಹೇಮಲತಾ ಅವರ ಮಾಹಿತಿ ಪ್ರಕಾರ, ಭಾನುವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ ಪಾಸ್ ಮತ್ತು ಲಡ್ಡು ಮಾರಾಟದ ಮೂಲಕ ₹2.24 ಕೋಟಿ ಆದಾಯ ದಾಖಲಾಗಿದೆ. ₹1 ಸಾವಿರ ಮತ್ತು ₹300 ಟಿಕೆಟ್‌ಗಳ ದರ್ಶನ ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಧರ್ಮದರ್ಶನ ಸೇರಿದಂತೆ ಎಲ್ಲ ಸಾಲುಗಳಲ್ಲಿ ಭಕ್ತರು ಸರಾಗವಾಗಿ ದರ್ಶನ ಪಡೆದಿದ್ದಾರೆ.

ಅಕ್ಟೋಬರ್ 18 ರಿಂದ 22 ರವರೆಗೆ ಅತೀ ಹೆಚ್ಚು ಜನಸಂದಣಿ ಇರುವುದರಿಂದ, ಭಕ್ತರು ಸಾಧ್ಯವಾದರೆ ಅಕ್ಟೋಬರ್ 18ರ ಒಳಗೆಯೇ ಬಂದು ದರ್ಶನ ಪಡೆಯುವ ಮೂಲಕ ಸಹಕರಿಸಬೇಕು ಎಂದು ಕೃಷ್ಣ ಬೈರೇಗೌಡ ಕೋರಿದ್ದಾರೆ. ದೇಗುಲದ ಸುತ್ತಲೂ ಅಳವಡಿಸಿರುವ 280 ಸಿಸಿಟಿವಿ ಕ್ಯಾಮೆರಾಗಳ ಕಣ್ಣಾವಲಿದ್ದು, ಹಾಸನಾಂಬ ದೇವಾಲಯದ ಎಡಭಾಗದಲ್ಲಿ ತೆರೆಯಲಾಗಿರುವ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಎಲ್ಲವನ್ನೂ ವೀಕ್ಷಿಸಲಾಗುತ್ತಿದೆ.

ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಶುರುವಾದ ಎರಡೇ ದಿನದಲ್ಲಿ ದೇವಾಲಯಕ್ಕೆ ₹2.25 ಕೋಟಿ ಆದಾಯ ಬಂದಿದೆ. ಗುರುವಾರ ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಶುಕ್ರವಾರದಿಂದ ಸಾರ್ವಜನಿಕ ದರ್ಶನ ಪ್ರಾರಂಭವಾಗಿದೆ. ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ₹ 300 ದರದ 27759 ಟಿಕೆಟ್‌ಗಳು ಮಾರಾಟವಾಗಿವೆ.

ಅದರಲ್ಲಿ ಆನ್‌ಲೈನ್‌ನಲ್ಲಿ 4,499 ಹಾಗೂ ನೇರ ಖರೀದಿಯಲ್ಲಿ 23,260 ಟಿಕೆಟ್‌ಗಳು ಮಾರಾಟವಾಗಿವೆ. ₹ 1ಸಾವಿರ ದರದ 12,396 ಮಾರಾಟವಾಗಿವೆ. ಇದರಲ್ಲಿ ಆನ್‌ಲೈನ್‌ನಲ್ಲಿ 3,912 ಹಾಗೂ ನೇರ ಖರೀದಿಗಳು 8484 ಆಗಿವೆ. 17,337 ಲಡ್ಡು ಪ್ರಸಾದ ಮಾರಾಟವಾಗಿದೆ. ₹300 ದರದ ಟಿಕೆಟ್‌ಗಳಿಂದ ಒಟ್ಟು ₹ 83,27,700 ₹ 1ಸಾವಿರ ದರದ ಟಿಕೆಟ್‌ಗಳಿಂದ ₹ 1,23,96,000 ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ₹ 17,33,700 ಸೇರಿ ಒಟ್ಟು ₹ 2,24,57,400 ಸಂಗ್ರಹವಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss