ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಶಾಸಕರ ದೌರ್ಜನ್ಯ, ದಬ್ಬಾಳಿಕೆ ಮಿತಿ ಮೀರಿದೆ. ಕಾಂಗ್ರೆಸ್ ಸರ್ಕಾರ 1800 ಕೋಟಿ ರೂ. ಲೂಟಿಗೆ, ನೆಲಮಂಗಲ ಕೆರೆ ಕಟ್ಟೆಗಳಿಗೆ ಕೊಳಚೆ ನೀರನ್ನು ಹರಿಸಲು ಹೊರಟಿದೆ. ಹೀಗಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನೆಲಮಂಗಲದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ರು. ಯಾವುದೇ ಕಾರಣಕ್ಕೂ ನೆಲಮಂಗಲದ ಕೆರೆಗಳಿಗೆ ವೃಷಭಾವತಿ ಕೊಳಚೆ ನೀರು ಹರಿಸಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ದೇವೇಗೌಡರು ಹಾಗೂ ಕುಮಾರಣ್ಣ ಅವರ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಅಂತಾ ಎಚ್ಚರಿಕೆ ನೀಡಿದರು.
ಇತ್ತೀಚಿಗೆ ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದಾರೆ. ಅದೇ ರೀತಿ ನೆಲಮಂಗಲದಲ್ಲಿ ಅಧಿಕಾರಿಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆಯಾಗ್ತಿದೆ. ಹೆದರಿಸಿ ಬೆದರಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸಯ್ಯ ವಿರುದ್ಧ ಕಿಡಿಕಾರಿದ್ರು.
ಕುಮಾರಣ್ಣನವರಿಗೆ ಅಧಿಕಾರ ಇದ್ದರೂ ಇಲ್ಲದಿದ್ದರೂ, ಅಧಿಕಾರಿಗಳನ್ನ ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಜನರು ಸಮಸ್ಯೆಗಳ ಬಗ್ಗೆ ಕರೆ ಮಾಡಿದಾಗ ಅವರಿಗೆ ಸಕಾರಾತ್ಮಕವಾಗಿ ಕುಮಾರಣ್ಣ ಸ್ಪಂದಿಸಿದ್ದಾರೆ. ಕುಮಾರಣ್ಣವರು ಎಂದು ಕೂಡ ವರ್ಗಾವಣೆಗೆ ಹಣವನ್ನ ಪಡೆದಿಲ್ಲ, ಇಷ್ಟು ಕೋಟಿ ಕೊಡಿ ನಿಮಗೆ ಪೋಸ್ಟಿಂಗ್ ಕೊಡ್ತೀನಿ ಎಂದು, ದೇವೇಗೌಡರು , ಕುಮಾರಣ್ಣ ಹಾಗೂ ಜೆಡಿಎಸ್ ಪಕ್ಷ ಕೆಟ್ಟತನದ ರಾಜಕಾರಣ ಮಾಡಿಲ್ಲ.
ಕಾಂಗ್ರೆಸ್ ಶಾಸಕರುಗಳಿಗೇ ಅವರ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ, ಮುಂದೆ ಯಾವ ಪಕ್ಷಕ್ಕೆ ಹೋಗಬೇಕೆಂದು ಲೆಕ್ಕಚಾರ ಮಾಡುತ್ತಿದ್ದೇವೆ ಅಂತಾ ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ?. ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಮುಂಬರುವ ದಿನಗಳಲ್ಲಿ, ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಕರ್ನಾಟಕದಿಂದ ಕಿತ್ತೆಸೆಯುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಲೂಟಿ ಮಾಡುತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ವೃಷಭಾವತಿ ನದಿ ಪೈಪ್ಲೈನ್ ಯೋಜನೆಗೆ 1800 ಕೋಟಿ ದಾಖಲೆ ಪ್ರಮಾಣದ ಪರ್ಸೆಂಟೇಜ್ ಇದು. ಹಲವಾರು ಸರ್ಕಾರಗಳು ಕರ್ನಾಟಕ ರಾಜ್ಯದಲ್ಲಿ ಆಡಳಿತ ಮಾಡಿರುವುದನ್ನು ನೋಡಿದ್ದೇವೆ. ಬೆಂಗಳೂರು ನಗರದ ಕೊಳೆಚೆ ನೀರನ್ನ, ಇವತ್ತು 69 ಕೆರೆಗಳನ್ನ ತುಂಬಿಸಲು ಈ ಯೋಜನೆಯನ್ನ ಮಾಡಿದ್ದೀರಾ? ಅಥವಾ ನಿಮ್ಮ ಜೇಬು ಗಳಿಗೆ ದುಡ್ಡು ತುಂಬಿಸಿಕೊಳ್ಳುವುದಕ್ಕಾ ಎಂದು ವಾಗ್ದಾಳಿ ನಡೆಸಿದರು.
ವರದಿ : ಲಾವಣ್ಯ ಅನಿಗೋಳ