ಅಕ್ಟೋಬರ್ 9ರಿಂದ ಪ್ರಖ್ಯಾತ ಹಾಸನಾಂಬ ಉತ್ಸವ ಶುರುವಾಗ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ. ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ, ಅಧಿಕೃತವಾಗಿ ಜಿಲ್ಲಾಡಳಿತದಿಂದ ಆಹ್ವಾನ ನೀಡಲಾಯ್ತು. ಬಳಿಕ ಸಿಎಂ, ಡಿಸಿಎಂ ಭೇಟಿಯಾಗಿ ಆಹ್ವಾನಿಸಲಾಗಿದೆ. ಈ ವೇಳೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಡಿಸಿ ಲತಾ ಕುಮಾರಿ ಸೇರಿ, ಅಧಿಕಾರಿಗಳು ಭಾಗಿಯಾಗಿದ್ರು.
ವರ್ಷದಿಂದ ವರ್ಷಕ್ಕೆ ಹಾಸನಾಂಬೆಯ ಪ್ರಸಿದ್ಧಿ ಉತ್ತುಂಗಕ್ಕೇರುತ್ತಿದೆ. ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. 2024ರಲ್ಲಿ ಭಾರೀ ನೂಕುನುಗ್ಗಲು ಉಂಟಾಗಿತ್ತು. ವಿಐಪಿಗಳು, ರಾಜಕೀಯ ಗಣ್ಯರಿಂದಾಗಿ, ಸಾಮಾನ್ಯ ಜನರು ಗಂಟೆಗಟ್ಟಲೆ ಕಾಯುವಂತಾಗಿತ್ತು. ಸ್ಪೆಷಲ್ ಪಾಸ್ ಪಡೆದಿದ್ರೂ ಪರದಾಟ ತಪ್ಪಿರಲಿಲ್ಲ. ಹಾಸನ ಉಸ್ತುವಾರಿ ಹೊತ್ತಿರುವ ಕೃಷ್ಣಬೈರೇಗೌಡರು, ಹಿಂದಿನ ಗೊಂದಲ ಮರುಕಳಿಸದಂತೆ ನೋಡಿಕೊಳ್ಳಿ ಅಂತಾ ಸೂಚಿಸಿದ್ದಾರೆ. ಹೀಗಾಗಿ, ಅಧಿಕಾರಿಗಳು ನಿರಂತರ ಸಭೆಗಳನ್ನು ಮಾಡ್ತಿದ್ದು, ಹಲವು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ.

ಕಳೆದ ಬಾರಿ ಮನಸೋಇಚ್ಛೆ ವಿಐಪಿ ಪಾಸ್ ವಿತರಿಸಿದ್ರಿಂದ, ಭಾರೀ ಗೊಂದಲ ಉಂಟಾಗಿತ್ತು. ಈ ಬಾರಿ ಶಿಷ್ಟಾಚಾರದಂತೆ, ನಿಯಮಿತವಾಗಿ ಗೋಲ್ಡನ್ ಪಾಸ್ ವಿತರಣೆಗೆ ನಿರ್ಧರಿಸಲಾಗಿದೆ. ಮುಂಜಾನೆ 5ರಿಂದ 11 ಗಂಟೆವರೆಗೆ ಮಾತ್ರ, ಪಾಸ್ ಇರೋರಿಗೆ ಸಮಯ ನೀಡಲಾಗಿದೆ. ಸರತಿ ಸಾಲು ಸಾಗಲು, 28 ಕಿಲೋ ಮೀಟರ್ ಬ್ಯಾರಿಕೇಡ್ ಅಳವಡಿಸಲು ಉದ್ದೇಶಿಸಲಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಸರತಿ ಸಾಲಿಗೆ ಜರ್ಮನ್ ಶೆಡ್ ಹಾಕಲಾಗುತ್ತಿದೆ. ಈ ಬಾರಿ 22 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಎಲ್ಲಾ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.




