ಬೆಂಗಳೂರು : ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವ ಕುರಿತ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಕಾನೂನು ಮತ್ತು ನ್ಯಾಯಾಲಯದ ಆಜ್ಞೆಯನ್ನು ಪರಿಪಾಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗೌರವಾನ್ವಿತ ಉಚ್ಛನ್ಯಾಯಾಲಯದ ವಿಭಾಗೀಯ ಪೀಠ ಆದೇಶ ಮಾಡಿದೆ. ಚಾಮರಾಜಪೇಟೆಯ ಸರ್ವೇ ನಂ.40 ರ ಬಗ್ಗೆ, ಸರ್ಕಾರ ಸೂಕ್ತವಾಗಿ ನಿರ್ಣಯ ಕೈಗೊಳ್ಳಬೇಕಿದೆ. ನಮ್ಮ ದೇಶ ಸರ್ವಜನಾಂಗದ, ಸರ್ವ ಧರ್ಮಿಯರು ಇರುವ ಸ್ಥಳವಾಗಿದ್ದು. ಇವೆಲ್ಲ ಅಂಶಗಳ ಬಗ್ಗೆಯೂ ವಿಶ್ಲೇಷಣೆಯಾಗಿದೆ. ಉಚ್ಛನ್ಯಾಯಾಲಯದ ಆದೇಶದ ಪರಿಪಾಲನೆ ಬಗ್ಗೆ ಚರ್ಚಿಸಲು ನಾಳೆ ಅಡ್ವೊಕೇಟ್ ಜನರಲ್ ಮತ್ತು ಕಂದಾಯ ಸಚಿವರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಜೊತೆ ಎಲ್ಲರ ಮನದಾಳದ ಇಚ್ಛೆಯನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ನಾಗರಿಕರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೋರ್ಟಿನ ಆದೇಶವನ್ನು ಸಂಪೂರ್ಣವಾಗಿ ಗ್ರಹಿಸಿದ ನಂತರ ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗುವುದು. ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಆಚರಣೆ ಕುರಿತಂತೆ ಹುಬ್ಬಳ್ಳಿ ನಗರಸಭೆಗಳು, ಸರ್ವಪಕ್ಷದ ಸಭೆ ನಡೆಸಿ 29 ಕ್ಕೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಿದೆ. ಜಮೀನಿನ ಮಾಲೀಕತ್ವ ದೃಷ್ಟಿಯಿಂದ ಈ ವಿಚಾರ ಬೇರೆಯಾಗಿದ್ದು, ಇದಕ್ಕೆ ಸುಪ್ರೀಂ ಕೋರ್ಟ್‍ನ ಆದೇಶವಿದೆ. ಕಾನೂನು ಮತ್ತು ನ್ಯಾಯಾಲಯದ ಆಜ್ಞೆಯ ಪರಿಪಾಲನೆ ಮಾಡಲಾಗುವುದು ಎಂದು ತಿಳಿಸಿದರು.