ಮತ್ತೆ ಸದ್ದು ಮಾಡುತ್ತಿರುವ ನೈಸ್ ಯೋಜನೆ ವಿವಾದದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತಷ್ಟು ಸ್ಫೋಟಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಷಯವನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ದಾಖಲೆಗಳೊಂದಿಗೆ ಚರ್ಚಿಸಲು ತಾವು ಸಿದ್ಧವೆಂದು ಸವಾಲು ಹಾಕಿದ್ದಾರೆ. ವಿಶೇಷವೆಂದರೆ, ಇದೇ ವೇಳೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವುದು ಗಮನ ಸೆಳೆದಿದೆ.
ಹೌದು ‘ನೈಸ್ ಯೋಜನೆಯ ಹೆಸರಿನಲ್ಲಿ ರೈತರ ಭೂಮಿಗೆ ತೊಂದರೆ ಉಂಟುಮಾಡಲಾಗುತ್ತಿದೆ ಎಂದು ಕಿಡಿಕಾರಿದ ಎಚ್ಡಿಕೆ, 1997-98ರಲ್ಲಿ ಸರ್ಕಾರ ನೋಟಿಫೈ ಮಾಡಿದ್ದ ಜಮೀನು ಬಳಿಕ ಖಾಸಗಿ ವ್ಯಕ್ತಿಗಳ ಪಾಲಾಗಿದ್ದೇಗೆ ಎಂದು ಪ್ರಶ್ನಿಸಿದರು. ಡಿ.ಕೆ. ಸುರೇಶ್ ಸೇರಿದಂತೆ ಕೆಲವರ ಹೆಸರಿನಲ್ಲಿರುವ ಜಮೀನು ಹಾಗೂ ನೈಸ್ ಸಂಸ್ಥೆ ನೀಡಿದ ನಿರಾಕ್ಷೇಪಣಾ ಪತ್ರ ಅಂದರೆ NoC ಕುರಿತು ಸಾಕ್ಷ್ಯ ಸಮೇತ ವಿವರಿಸಿದ ಅವರು, ಇವೆಲ್ಲವೂ ಹಿಂಬಾಗಿಲ ವ್ಯವಹಾರಗಳು ಎಂದು ಆರೋಪಿಸಿದರು.
ಆದರೆ ಇದೇ ಸಂದರ್ಭದಲ್ಲಿ ಅಚ್ಚರಿಯ ಹೇಳಿಕೆ ನೀಡಿದ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹಿರಂಗವಾಗಿ ಮೆಚ್ಚಿಕೊಂಡರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೈಸ್ ವಿಚಾರವಾಗಿ ಸುಪ್ರೀಂ ಕೋರ್ಟ್ಗೆ ಸರಿಯಾದ ವರದಿ ಸಲ್ಲಿಸಲಾಗಿತ್ತು ಎಂಬ ಕಾರಣಕ್ಕಾಗಿ ತಾವು ಅವರನ್ನು ಮೆಚ್ಚುವುದಾಗಿ ಸ್ಪಷ್ಟಪಡಿಸಿದರು. ತಮ್ಮ ಬಳಿ ಇರುವ ಪ್ರತಿಯೊಂದು ಆರೋಪಕ್ಕೂ ದಾಖಲೆಗಳೇ ಆಧಾರ ಎಂದು ಅವರು ಪುನರುಚ್ಚರಿಸಿದ್ದಾರೆ.
ನೈಸ್ ಅಕ್ರಮದ ವಿರುದ್ಧ ತಾವು ಮಾಡುತ್ತಿರುವ ಹೋರಾಟ ನಿಲ್ಲುವುದಿಲ್ಲ ಎಂದಿರುವ ಎಚ್ಡಿಕೆ, ಧಮ್ ಇದ್ದರೆ ಚರ್ಚೆಗೆ ಬರುವಂತೆ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ದೊಡ್ಡ ಬಿಸಿಗಾಳಿ ಎದ್ದಿದೆ ಅಂತಾನೆ ಹೇಳಬಹುದು.




