www.karnatakatv.net : ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮೂಲಕ ವಿಶಿಷ್ಟ ಗುರುತಿನ ಸಂಖ್ಯೆ ನೀಡಿದೆ. ಆಧಾರ್ ಕಾರ್ಡ್ ಮುಖಾಂತರ ವ್ಯಕ್ತಿಯ ಗುರುತು, ದೃಢೀಕರಣ, ವಿವಿಧ ಸಹಾಯಧನಗಳು ಸೇರಿದಂತೆ ಸರ್ಕಾರದ ಯೋಜನಗಳು ಜನರಿಗೆ ನೇರವಾಗಿ ತಲುಪುವಂತೆ ಮಾಡುತ್ತೆ. ಸದ್ಯ ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸೋ ಉದ್ದೇಶದಿಂದ ಹೆಲ್ತ್ ಕಾರ್ಡ್ ವಿತರಿಸೋದಕ್ಕೆ ಮುಂದಾಗಿದೆ.
ಈ ಹೆಲ್ತ್ ಕಾರ್ಡ್ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಆಯುಷ್ಮಾನ್ ಭಾರತ್ ಯೋಜನೆಯಂತಹ ಆರೋಗ್ಯ ಸೇವೆಗಳ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ. ಡಿಜಿಟಲ್ ತಂತ್ರಜ್ಞಾನದ ಈ ಕಾರ್ಡ್ ನ ಮೂಲಕ ಪ್ರತಿಯೊಬ್ಬರಿಗೂ ನಿರ್ದಿಷ್ಟ ಸಂಖ್ಯೆಯನ್ನು ಒದಗಿಸಲಾಗುತ್ತೆ. ಈ ಕಾರ್ಡ್ ನಲ್ಲಿ ರೋಗಿಯ ಸಂಪೂರ್ಣ ಮಾಹಿತಿ ಇರಲಿದೆ. ಈ ಮೂಲಕ ವೈದ್ಯರು ರೋಗಿಯ ಆರೋಗ್ಯದ ಬಗ್ಗೆ ಕೂಡಲೇ ತಿಳಿಯಲು ಇದು ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ ರೋಗಿಯ ಆರೋಗ್ಯದ ಹಿಸ್ಟರಿ ಕೂಡ ಇದರಲ್ಲಿ ನಮೂದಾಗಿರುತ್ತೆ. ಹೀಗಾಗಿ ವ್ಯಕ್ತಿಯ ಸದ್ಯದ ಆರೋಗ್ಯ ಸ್ಥಿತಿ ಸೇರಿದಂತೆ ಹಿಂದೆ ಯಾವ ಯಾವ ಸಮಸ್ಯೆಗೆ ಏನೆಲ್ಲಾ ಚಿಕಿತ್ಸೆ ಪಡೆದರೆಂಬ ಸಂಪೂರ್ಣ ಮಾಹಿತಿ ವೈದ್ಯರಿಗೆ ಒಂದೇ ನಿಮಿಷದಲ್ಲಿ ತಿಳಿಯಲಿದೆ. ಹೀಗಾಗಿ ರೋಗಿಯು ವರ್ಷಗಳ ಹಳೆಯ ಆಸ್ಪತ್ರೆಗಳ ಫೈಲ್ ಗಳನ್ನ ಹಿಡಿದುಕೊಂಡು ಆಸ್ಪತ್ರೆಗಳಿಗೆ ಹೋಗೋದು ತಪ್ಪಲಿದೆ. ಈ ಹೆಲ್ತ್ ಕಾರ್ಡ್ ಮೂಲಕ ಸರ್ವರಿಗೂ ಆರೋಗ್ಯ ಭಾಗ್ಯ ಒದಗಿಸೋ ಉದ್ದೇಶ ಹೊಂದಿರೋ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಸೇರಿದಂತೆ ಮತ್ತಿತಕ ಆರೋಗ್ಯ ಸಂಬಂಧಿತ ಯೋಜನೆಗಳ ಪ್ರಯೋಜನ ಪಡೀಬಹುದಾಗಿದೆ.
ಹೆಲ್ತ್ ಕಾರ್ಡ್ ನಲ್ಲಿನ ಆರೋಗ್ಯದ ಕಾರ್ಡ್ ಐಡಿಯನ್ನು ವ್ಯಕ್ತಿಯ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಬಳಸಿ ರಚಿಸಲಾಗುವುದು. ಇದಕ್ಕಾಗಿಯೇ ಕೇಂದ್ರ ಸರ್ಕಾರ ಆರೋಗ್ಯ ಪ್ರಾಧಿಕಾರವನ್ನು ರಚಿಸೋ ಮೂಲಕ ವ್ಯಕ್ತಿಯ ಎಲ್ಲಾ ದಾಖಲೆಯನ್ನು ಸಂಗ್ರಹಿಸಲಿದೆ. ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಅಥವಾ ಆರೋಗ್ಯ ಪೂರೈಕೆದಾರರನ್ನು ಈ ಹೆಲ್ತ್ ಕಾರ್ಡ್ ನ ನೋಂದಣಿಗೆ ಸಂಪರ್ಕಿಸಬಹುದಾಗಿದೆ.