ಹಾಸನದಲ್ಲಿ 10 ಮಂದಿ ಬಲಿಯಾದ ಟ್ರಕ್ ದುರಂತಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಮ್ಮಲ ಮರುಗಿದ್ದಾರೆ. 93ರ ಇಳಿವಸ್ಸಿನಲ್ಲೂ ವೀಲ್ಹ್ ಚೇರ್‌ನಲ್ಲೇ ಕುಳಿತು, ಹಿಮ್ಸ್ ಆಸ್ಪತ್ರೆಗೆ ಹೋಗಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಸೆಪ್ಟೆಂಬರ್ 13, ಸೆಪ್ಟೆಂಬರ್ 14ರಂದು ಪ್ರತಿಯೊಂದು ಮೃತರ ಮನೆಗಳಿಗೆ, ಹೆಚ್‌ಡಿ ದೇವೇಗೌಡ್ರು ಭೇಟಿ ಕೊಟ್ಟಿದ್ರು. ದೇವೇಗೌಡ್ರನ್ನ ನೋಡುತ್ತಿದ್ದಂತೆ, ಮೃತರ ಕುಟುಂಬಸ್ಥರ ಕಣ್ಣೀರಿನ ಕಟ್ಟೆಯೊಡೆದಿತ್ತು. ಹೆಚ್‌ಡಿಡಿ ಕೂಡ ಭಾವಕರಾಗಿದ್ರು. ಹೊಳೆನರಸೀಪುರದ ಬಂಟರಹಳ್ಳಿಯ ನಿವಾಸಿಯಾಗಿದ್ದ ಪ್ರಭಾಕರ್, ಮುತ್ತಿಗೆಹಿರೀಹಳ್ಳಿಯ ಗೋಕಲ್ ಮನೆಗೂ, ದೇವೇಗೌಡ್ರು ಹೋಗಿದ್ದಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮೃತ ಗೋಕಲ್ ತಂಗಿಯ ವಿದ್ಯಾಭ್ಯಾಸ ಖರ್ಚನ್ನು, ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಗೋಕುಲ್ ತಂಗಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಜೆಡಿಎಸ್ ಪಕ್ಷದಿಂದ ತಲಾ 1 ಲಕ್ಷ ರೂಪಾಯಿ ಪರಿಹಾರ, ಗಾಯಾಳುಗಳಿಗೆ ₹25 ಸಾವಿರದಿಂದ ₹15 ಸಾವಿರದವರೆಗೆ ಪರಿಹಾರವನ್ನು, ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿಯಿಂದ ಮೃತರ ಮಾಹಿತಿ ಪಡೆದು ದೇವೇಗೌಡರು ಕುಟುಂಬದವರಿಗೆ ಪರಿಹಾರ ಹಣವನ್ನು ಹಸ್ತಾಂತರಿಸಲಾಗುವುದು. ಅಥವಾ ಜಿಲ್ಲಾಧಿಕಾರಿ ಮೂಲಕವೇ ಅರ್ಹರಿಗೆ ಪರಿಹಾರ ಹಣ ತಲುಪಿಸಲಾಗುವುದು ಅಂತಾ, ದೇವೇಗೌಡ್ರು ಹೇಳಿದ್ರು. ಜೊತೆಗೆ ರಾಜ್ಯ ಸರ್ಕಾರ ಪರಿಹಾರದ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಹಾರ ಮೊತ್ತ ಹೆಚ್ಚು ಮಾಡಬೇಕು ಎಂದು ಹೇಳುತ್ತೇನೆ. ನೆರೆ ರಾಜ್ಯದಲ್ಲಿ ಹೇಗೆ ಪರಿಹಾರ ಕೊಡ್ತಾ ಇದ್ದಾರೆ. ಇಲ್ಲಿ ಇಂತಹ ದುರ್ಘಟನೆ ಆದಾಗ, ಕೆಲವು ಕುಟುಂಬಗಳು ನಿರ್ಗತಿಕರಾಗೋ ಪರಿಸ್ಥಿತಿ ಇದೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ಸಾಧ್ಯವಾದರೆ 10 ಲಕ್ಷ ರೂಪಾಯಿ ಕೊಡುವಂತೆ ಕೋರಲಾಗುವುದು ಅಂತಾ ದೇವೇಗೌಡ್ರು ಹೇಳಿದ್ದಾರೆ. ಹೃದಯವಂತಿಕೆ ಮೆರೆದ ದೇವೇಗೌಡರ ಈ ನಡೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ.