Tuesday, December 17, 2024

Latest Posts

BENGALURE :ಕರ್ನಾಟಕದಲ್ಲಿ ಇನ್ನೂ 3 ದಿನ ಭಾರಿ ಚಳಿ

- Advertisement -

ಕರ್ನಾಟಕದಲ್ಲಿ ಮಳೆಯ ಕಾಟದ ಜೊತೆ ಜೊತೆಗೆ ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಹೀಗಾಗಿ ಜನರು ಥಂಡಿಗೆ ಮುದುಡಿಹೋಗಿದ್ದಾರೆ. ಕಳೆದ ಎರಡು ದಿನದಿಂದ ಅತೀ ಹೆಚ್ಚು ಚಳಿ ಬೀಳುತ್ತಿದೆ. ಸಾಕಪ್ಪ ಚಳಿಯ ಸಹವಾಸ ಅಂತಿದ್ದ ಜನರಿಗೆ ಹವಾಮಾನ ಇಲಾಖೆ ಶಾಕ್‌ ಕೊಟ್ಟಿದೆ. ಹೌದು.. ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಚಳಿ ಬೀಳಲಿದ್ದು ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಈ ಮಧ್ಯೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಈ ವಾರದಲ್ಲಿ ಮತ್ತೆ ಮಳೆ ಬೀಳುವ ಸಾಧ್ಯತೆಯೂ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದ್ದು.. ಮಳೆ.. ಚಳಿಗೆ ಜನರು ಥಂಡ ಹೊಡೆದಿದ್ದಾರೆ.

 

 

ಬೆಂಗಳೂರಲ್ಲಿ ಬರೋಬ್ಬರಿ 14 ವರ್ಷದ ಬಳಿಕ ಅತ್ಯದಿಕ ಚಳಿ ಬೀಳಲಿದೆ, ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಅತೀ ಹೆಚ್ಚು ಚಳಿ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆ ಇದ್ದು ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ಕೊಟ್ಟಿದೆ.. ಇಂದು ರಾತ್ರಿ 12 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಹಿನ್ನೆಲೆಯಲ್ಲಿ ಚಳಿಯ ತೀವ್ರತೆ ಜಾಸ್ತಿ ಇರಲಿದೆ. 2011ರ ಡಿ.24ರ ರಾತ್ರಿ 12.8 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. 14 ವರ್ಷಗಳ ಬಳಿಕ ತೀವ್ರ ಚಳಿ ಕಾಣಿಸಿಕೊಳ್ಳಲಿದೆ.

 

ವಾಡಿಕೆಗಿಂತ ಅಧಿಕ ಮಳೆ ಬಿದ್ದಿರುವುದು, ಭೂಮಿಯಲ್ಲಿ ತೇವಾಂಶ ಇರುವುದು, ಮೋಡ ಕವಿದ ವಾತಾವರಣ, ಸೈಕ್ಲೋನ್ ಉಂಟಾಗಿರುವುದು ಹಾಗೂ ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದೂ ಸೇರಿ ವಿವಿಧ ಕಾರಣಗಳಿಂದ ವಾಡಿಕೆಗಿಂತ 2-3 ಡಿ.ಸೆ. ಉಷ್ಣಾಂಶ ಕುಸಿದಿದೆ. ಮೋಡ ಕವಿದ ವಾತಾವರಣ ಜತೆಗೆ ತಣ್ಣನೆ ಗಾಳಿ ಬೀಸುತ್ತಿದೆ. ಸಂಜೆ ಮತ್ತು ಮುಂಜಾನೆ ಇಬ್ಬನಿಯೂ ಬೀಳುತ್ತಿದೆ. ಹಾಗಾಗಿ, ರಾತ್ರಿ ಶುರುವಾಗುತ್ತಿದ್ದಂತೆ ಚಳಿ ಕಾಣಿಸಿಕೊಳ್ಳುತ್ತಿದೆ. ಮುಂಜಾನೆ ಇದರ ತೀವ್ರತೆ ಇನ್ನಷ್ಟು ಹೆಚ್ಚಿರುತ್ತದೆ. ಅಲ್ಲದೇ ಡಿ. 17 ರ ರಾತ್ರಿ ಅತೀವ ಚಳಿಯಿರುವುದು ಮಾತ್ರವಲ್ಲ, ಡಿಸೆಂಬರ್‌ ತಿಂಗಳು ಪೂರ್ತಿ ಪ್ರತಿ ರಾತ್ರಿಯೂ ಚಳಿಯಿರಲಿದೆ ಅಂತ ಐಎಂಡಿ ತಜ್ಞರು ತಿಳಿಸಿದ್ದಾರೆ. ಜೊತೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ನಗರದಲ್ಲಿ 21ರಿಂದ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ ಅಂತ ಇಲಾಖೆ ಮಾಹಿತಿ ನೀಡಿದೆ.

 

 

ತೀವ್ರ ಶೀತ ಗಾಳಿಯ ಸಾಧ್ಯತೆ ಹಿನ್ನೆಲೆ ಇಂದಿನಿಂದ ಮೂರು ದಿನ ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಅದೇ ಭಾಗದ ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ನೀಡಲಾಗಿದೆ. ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ 6 ರಿಂದ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಇದು ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಇನ್ನು ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಹ ಶೀತ ಅಲೆಯ ಇರಲಿದ್ದು, ಅಲ್ಲಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕಂಡುಬರಲಿದೆ. ಇನ್ನು ಈ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಡೆ ಮೂರು ದಿನಗಳ ಕಾಲ ಒಣ ಹವೆ ಇರುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

 

ಚಳಿ ಹಿನ್ನೆಲೆಯಲ್ಲಿ ವಾಯುವಿಹಾರ, ವ್ಯಾಯಾಮಕ್ಕೆ ಹೋಗುವವರು ತುಂಬ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಮೂಳೆ ನೋವಿನಿಂದ ಬಳಲುತ್ತಿರುವವರು ಹೊರಹೋಗದಿರುವುದೇ ಉತ್ತಮ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಗಮನಹರಿಸಬೇಕು. ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಸೇರಿ ಇತರ ಕಾಯಿಲೆಗಳು ಎದುರಾಗಲಿವೆ. ಈ ಬಗ್ಗೆ ಜನರು ಅಗತ್ಯ ಮುನ್ನಚ್ಚರಿಕಾ ಕ್ರಮ ತೆಗೆದು ಕೈಗೊಳ್ಳಬೇಕು ಅಂತ ಇಲಾಖೆ ಮುನ್ಸೂಚನೆ ನೀಡಿದೆ.

- Advertisement -

Latest Posts

Don't Miss