ಉತ್ತರ ಭಾರತ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಭೀಕರ ಪ್ರವಾಹದಿಂದ ಬದುಕು ಛಿದ್ರವಾಗಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಧಾರಾಕಾರ ಮಳೆಯಿಂದ ನದಿಗಳ ಉಕ್ಕಿ ಹರಿಯುತ್ತಿವೆ. ಹಠಾತ್ ಪ್ರವಾಹದಿಂದ ಹಲವು ರಾಜ್ಯಗಳಲ್ಲಿ ಹಾನಿಯ ಪ್ರಮಾಣ ಗಂಭೀರವಾಗಿದೆ. ಅದರಲ್ಲೂ ಪಂಜಾಬ್ ಮತ್ತು ದೆಹಲಿ ರಾಜ್ಯಗಳು ಅತಿ ಹೆಚ್ಚು ಹಾನಿಗೆ ಒಳಗಾಗಿವೆ.
ಪಂಜಾಬ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ 23 ಜಿಲ್ಲೆಗಳಲ್ಲಿಯೂ ಬಿರುಕು ಹಾಕಿದ್ದು, ಗುರುದಾಸ್ಪುರ ಮತ್ತು ಅಮೃತಸರ ಜಿಲ್ಲೆಗಳು ಅತ್ಯಧಿಕ ಹಾನಿಗೊಳಗಾಗಿವೆ. ಈ ಪ್ರವಾಹದಿಂದ 1,655 ಕ್ಕೂ ಹೆಚ್ಚು ಹಳ್ಳಿಗಳಿಗೆ ಬೃಹತ್ ಸಂಕಷ್ಟ ಉಂಟಾಗಿದೆ. ರೈತರಿಗೆ ಹೊಲಗಳು ಕೆರೆಗಳಾಗಿ ಮಾರ್ಪಟ್ಟಿದ್ದು, ಮನೆಗಳು ಜಲಾವೃತಗೊಂಡಿವೆ. ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಫಜಿಲ್ಕಾ ಭಾಗದಲ್ಲಿ ಬಿರುಸಾದ ಮಳೆಯ ಕಾರಣ ನದೀ ನೀರಿನಲ್ಲಿ ನೂರಾರು ಮನೆಗಳು, ಕೆಲ ಸೇತುವೆಗಳು ಮುಳುಗಿವೆ. ಪ್ರಾಣ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ಟ್ಯೂಬ್‌ಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉತ್ತರಾಖಂಡದ ಗರ್ವಾಲ್ ಪ್ರದೇಶದ ಶ್ರೀನಗರ ಮತ್ತು ಪೌರಿ ಗರ್ವಾಲ್ ನಡುವಿನ ಅಲಕನಂದಾ ನದಿ ಉಕ್ಕಿಹರಿಯುತ್ತಿದೆ. ನದಿಯ ಹರಿವಿನಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಕೂಡ ಪ್ರವಾಹದ ಬಲೆಗೆ ಸಿಲುಕಿದೆ. ಯಮುನಾ ನದಿಯ ನೀರಿನ ಮಟ್ಟ 207.48 ಮೀಟರ್ ತಲುಪಿದೆ. ಇದು ಅಪಾಯದ ಮಟ್ಟವನ್ನೇ ಮೀರುತ್ತಿದ್ದು, ನದಿಯಿಂದ ನೇರವಾಗಿ ಪ್ರವಾಹದ ನೀರು ದೆಹಲಿ ಸಚಿವಾಲಯದವರೆಗೆ ನುಗ್ಗಿದ ಘಟನೆ ಸಂಭವಿಸಿದೆ. ಮುಖ್ಯಮಂತ್ರಿಗಳು ಮತ್ತು ಸಚಿವರ ಕಚೇರಿಗಳು ಇರುವ ಈ ಪ್ರದೇಶದ ಪರಿಸ್ಥಿತಿ ಆತಂಕಕಾರಿ ಆಗಿದೆ.
ದೆಹಲಿಯ ಯಮುನಾ ನದಿ ನೀರು ಹಲವು ಜನ ವಸತಿ ಪ್ರದೇಶಗಳಿಗೆ ನುಗ್ಗಿದೆ. ಯಮುನಾ ನದಿ ನೀರಿನ ಮಟ್ಟ ಕೊನೆಯ ಹಂತ 208 ಮೀಟರ್ ಸಮೀಪಕ್ಕೆ ತಲುಪಿದೆ. ಇನ್ನೂ ಪ್ರವಾಹದ ನೀರಲ್ಲಿ ನಾಯಿಯೊಂದು ಈಜುತ್ತಾ ಬಂದು ಪ್ರಾಣ ಉಳಿಸಕೊಂಡಿದೆ.
ಕಂದಾಯ ಇಲಾಖೆಯ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಈವರೆಗೆ 8,018 ಜನರನ್ನು ತಾತ್ಕಾಲಿಕ ಶಿಬಿರಗಳಿಗೆ, ಹಾಗೂ 2,030 ಜನರನ್ನು 13 ಶಾಶ್ವತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ದೆಹಲಿ ಸರ್ಕಾರ ಪರಿಸ್ಥಿತಿಯ ಮೇಲೆ 24/7 ನಿಗಾ ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




